ತಂದೆಯವರ ನೆನಪುಗಳು - ಭಾಗ 4
ಮೊದಲಿಗೆ ನಿಮ್ಮ ಅಪಾರವಾದ ಸ್ನೇಹ, ಬೆಂಬಲಕ್ಕೆ ನನ್ನ ಧನ್ಯವಾದಗಳು. ನಿಮ್ಮ ಸಹಕಾರದ ಹೊರತು ನನಗೆ ಬರೆಯಲು ಇದು ಸಾಧ್ಯವೇ ಇಲ್ಲ. ಹೀಗೆಯೇ ಈ ಬೆಂಬಲ ಮುಂದುವರೆಯಲಿ, ಮತ್ತು ನನ್ನನ್ನು ಈ ಸಂಚಿಕೆಯನ್ನು ಅಂತ್ಯದವರೆಗೆ ಬರೆಯುವ ಸಾಹಸ ನೀಡಲಿ. ದಯವಿಟ್ಟು ತಡವಾಗಿ ಈ ಸಂಚಿಕೆ ಬರೆದದ್ದಕ್ಕೆ ಕ್ಷಮೆ ಇರಲಿ.
ಸ್ವಲ್ಪ ವರುಷಗಳ ಬಳಿಕ, ಯಾಕೋ ಏನೋ ಹತ್ತಿರದ ಸಂಬಂಧಗಳು ದೂರವಾಗಲು ಆರಂಭಿಸಿದವು. ಕಾರಣಗಳು ಹತ್ತು ಹಲವಾರು. ಕೆಲವೊಮ್ಮೆ ಆತ್ಮೀಯರಿಗೆ ಬೇರೆ ಸಂಬಂಧಗಳು ಹತ್ತಿರವಾದಾಗ, ಕುಟುಂಬದ ರಕ್ತ ಸಂಬಂಧಗಳು ದೂರವಾಗುವುದು ಸಹಜ. ಹತ್ತಿರದ ಸಂಬಂಧಿಕರ ಆಕಸ್ಮಿಕ ನಿಧನದ ನಂತರ ನಡೆದ ಕೆಲವು ಸಂಗತಿಗಳು, ಕೇಳಿದ ನಿಷ್ಟುರವಾದ ಮಾತುಗಳು ಯಾಕೋ ಏನೋ ಇವರನ್ನು ವಿಚಲಿತರನ್ನಾಗಿಸಿತ್ತು. ಸಂಬಂಧಗಳ ಬಗೆಗಿನ ಇವರ ದೃಷ್ಟಿಕೋನವನ್ನು ಬದಲಾಯಿಸಿತ್ತು. ಅದೇಕೋ ರಕ್ತ ಸಂಬಂಧಗಳಿಗಿಂತ ದೂರವಿದಷ್ಟೇ ಮನಸ್ಸಿಗೆ ಉತ್ತಮ ಎನ್ನುವ ಮಟ್ಟಕ್ಕೆ ಬಂದರು.
ಹತ್ತಿರದ ಸಂಬಂಧಿಕರ ಮನೆ ಗೃಹ ಪ್ರವೇಶಕ್ಕೂ ತಂದೆಯವರಿಗೆ ಆಮಂತ್ರಣವೂ ಕೂಡ ನೀಡದಷ್ಟು ಹತ್ತಿರದ ಸಂಬಂಧಗಳು ದೂರವಾದವು. ಅದೇನೋ ಏಕೋ ನಮ್ಮನ್ನು ಕಂಡರೆ ಕೆಲವರಿಗೆ ಏನೋ ನಿಷ್ಟುರ ಮಾತುಗಳನ್ನು ಹೇಳಬೇಕು ಅನ್ನೋ ತುಡಿತ, ನಮ್ಮ ಬಡತನ , ಕಷ್ಟವನ್ನು ನೋಡಿ ಹೀಯಾಳಿಸುವ ಚಾಳಿ. ಆ ದೇವರಿಗೆ ಗೊತ್ತು ಅವರಿಗೇಕೆ ಅಷ್ಟೊಂದು ಗತ್ತು, ಸೊಕ್ಕು. ಹಣದ ಮದವೋ , ಅಥವಾ ತಾವು ಇವರಿಗಿಂತ ಮೇಲು ಎಂದು ತೋರಿಸುವ ಆಸೆಯೋ. ಒಂದಂತೂ ಸತ್ಯ, ಎಂದೂ ನಾವು ಅವರಿಗೆ ಕೆಟ್ಟದನ್ನು ಬಯಸಲಿಲ್ಲ. ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಅನ್ನೋ ನಂಬಿಕೆ. ಒಳ್ಳೆಯ ದಿನಗಳು ಒಂದಲ್ಲ ಒಂದು ದಿನ ಬರಬಹುದು ಅನ್ನೋ ದೃಢ ನಂಬಿಕೆ. ಹಾಗೆ ಹೀಯಾಳಿಸಿ ಮಾತನಾಡಿದವರನ್ನು ದೇವರು ನೋಡಿಕೊಳ್ಳುತ್ತಾರೆ ಅನ್ನೋದಷ್ಟೇ ಅವರ ಮಾತು.
ಸಮಯ ಬಂದಾಗ ಮತ್ತೆ ಸಂಬಂಧ ತಾನಾಗಿಯೇ ಹತ್ತಿರವಾಗಬಹುದು ಎಂದು ನಂಬಿದವರು ಇವರು. ಅದು ಸಾಧ್ಯವಾಗಲು ಮುಂದೆ ಮಕ್ಕಳಿಗೆ ಕೆಲಸ ಸಿಕ್ಕಾಗ ಅದಾಗಿಯೇ ಮತ್ತೆ ಅದೇ ಹಳೆಯ ಸಂಬಂಧಗಳು ಹತ್ತಿರವಾಗಲು ಆರಂಭಿಸಿತು. ಸಂಬಂಧ ಹತ್ತಿರವಾಯಿತು ಎಂದು ಖುಷಿ ಪಡಲಿಲ್ಲ, ದೂರವಾಯಿತು ಎಂದು ತುಂಬಾನೇ ಕೊರಗಲಿಲ್ಲ.
ನೆರೆಹೊರೆಯವರ ಬಗ್ಗೆ ಬರೆಯಲೇಬೇಕು. ನಮ್ಮ ಮನೆಯ ಹತ್ತಿರ ಇನ್ನು ಎರಡು ಮನೆಗಳು ಇದ್ದವು. ಎಲ್ಲ ಮನೆಗಳಿಗೂ ಒಬ್ಬರೇ ಮಾಲೀಕರು. ಕೆಳಮನೆಯಲ್ಲಿ ಚಿತ್ರದುರ್ಗದವರು ವಾಸಿಸುತ್ತಿದ್ದರು. ಅವರ ಹೆಸರು ಶ್ರೀ ಗುರುರಾಜಪ್ಪ ಮಾಸ್ಟ್ರು. ಕಡಬದ ಕಾಲೇಜಿನಲ್ಲಿ ಕೃಷಿ ಅಧ್ಯಾಪಕರು. ಅವರಿಗೆ ಮೂರು ಮಕ್ಕಳು. ಇವರು ನಮ್ಮ ಜೊತೆ ಒಳ್ಳೆಯ ಆತ್ಮೀಯತೆ ಹೊಂದಿದ್ದರು. ನಮ್ಮ ತಂದೆಯವರು ಗುರುರಾಜಪ್ಪ ಮಾಸ್ಟ್ರು ನಡುವೆ ಒಳ್ಳೆಯ ಆತ್ಮೀಯತೆ ಸಮಯ ಕಳೆದಂತೆ ಬೆಳೆಯಿತು. ಇನ್ನೊಬ್ಬರು ಮೇಲಿನ ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಹೆಸರು "ಶ್ರೀಕೃಷ್ಣ ಭಟ್", ಅವರು "ಕೆನರಾ ಸ್ಪೇರ್ ಪಾರ್ಟ್ಸ್" ಎಂಬ ಅಂಗಡಿಯ ಮಾಲೀಕರು. ಅವರ ಅಂಗಡಿ ಕಡಬದಲ್ಲಿ ಇತ್ತು. ಮನೆ ಪುತ್ತೂರು , ಹೀಗಾಗಿ ಕಡಬಕ್ಕೆ ಹತ್ತಿರದ ಊರಾದ ಕುಟ್ರುಪಾಡಿಯಲ್ಲಿ ವಾಸಿಸುತ್ತಿದ್ದರು. ಈಗಲೂ ಕೆನರಾ ಭಟ್ ಅಂತಾನೆ ಕರೆಯುತ್ತೇವೆ. ಇವರೂ ಕೂಡ ನಮಗೆ ಕಷ್ಟ ಸಮಯದಲ್ಲಿ ತುಂಬಾ ಸಹಾಯ ಮಾಡಿದರು. ದೀಪಕ ಮತ್ತು ನನ್ನ CET ಪರೀಕ್ಷೆ ಪುತ್ತೂರಿನಲ್ಲಿ ಇದ್ದಾಗ ಇವರ ಮನೆಯಲ್ಲೇ ಎರಡು ದಿನ ಇದ್ದೆವು. ಇವರ ಅಮ್ಮ, ಅಣ್ಣ , ತಮ್ಮ ನಮ್ಮನ್ನು ನೋಡಿಕೊಂಡ ರೀತಿ ಯಾವುದೇ ನಮ್ಮ ಸಂಬಂಧಿಕರ ಪ್ರೇಮಕ್ಕಿಂತ ಹೆಚ್ಚಾಗಿತ್ತು. ಅವರ ಅಮ್ಮ ಮಾಡಿದ ಉಪ್ಪಿನಕಾಯಿ ಈಗಲೂ ನೆನಪಿದೆ. ಅವರು ಮಾಡುತ್ತಿದ್ದ ಬೆಂಡೆಕಾಯಿ ಹುಳಿ ಅಂತೂ ಈಗಲೂ ಬಾಯಿಯಲ್ಲಿ ನೀರು ತರಿಸುತ್ತದೆ.
ಈ ಮೇಲೆ ಹೇಳಿದ ಮೂರು ಕುಟುಂಬಗಳು ಸೇರಿ ಎರಡು ದಿನ ಪ್ರವಾಸಕ್ಕೆ ಹೊರಟೆವು. ಶ್ರವಣಬೆಳಗೊಳ , ಬೇಲೂರು , ಹಳೇಬೀಡು , ಮೈಸೂರು ತಲುಪಿದೆವು. ಯಾವ ಹೋಟೆಲ್ ರೂಮ್ ಸಿಗದೇ (ನಮ್ಮ ಬಜೆಟ್ ನಲ್ಲಿ) ಕೊನೆಗೆ ಅಲ್ಲಿನ ಪ್ರಸಿದ್ದವಾದ ಚರ್ಚ್ ನಲ್ಲಿ ಬೆಂಚಿನ ಮೇಲೆ ಮಲಗಿ ರಾತ್ರಿ ಕಳೆದದ್ದು ಒಂದು ಹೊಸ ಅನುಭವವನ್ನೇ ನೀಡಿತು. ಮರುದಿನ ಮೈಸೂರ್ ತಿರುಗಾಡಿ ರಾತ್ರಿ ಮನೆಗೆ ತಲುಪಿದೆವು. ಅದರ ಕೆಲವೊಂದು ಚಿತ್ರಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ.
ತೋಡಿ(ಸಣ್ಣ ಕಾಲುವೆ)ನ ಆಚೆ ಕಡೆ ಶ್ರೀ ತಿಮ್ಮಪ್ಪ ಗೌಡರ ಮನೆ ಇತ್ತು. ಅವರಿಗೆ ಇಬ್ಬರು ಮಕ್ಕಳು. ಇಂದಿಗೂ ಅವರ ಕುಟುಂಬದ ಜೊತೆಗೆ ಉತ್ತಮ ಆತ್ಮೀಯತೆ ಹಾಗೇನೇ ಇದೆ. ಅವರ ಮಗ ನಾನು ಒಂದೇ ಶಾಲೆ, ಸಹಪಾಠಿಗಳು. ಅವನು, ಅವನ ಅಣ್ಣ ಮುಂದೆ ನಮ್ಮ ಮನೆಗೆ ಟ್ಯೂಷನ್ ಗೆ ಕೂಡ ಬರುತ್ತಿದ್ದನು. ಅವರ ತೋಟದಲ್ಲಿ ಬೆಳೆದ ಗೋಡಂಬಿ, ಬಾಳೆಹಣ್ಣು, ಕೋಕಂ (ಪುನರ್ಪುಳಿ), ತೆಂಗಿನ ಕಾಯಿ ನಮ್ಮ ಮನೆಗೆ ಕೊಡುತ್ತಿದ್ದರು. ನುಗ್ಗೆ ಕಾಯಿಯಂತೂ ನಮ್ಮ ಮನೆಯ ಅಡುಗೆ ಮನೆ ಸೇರುತಿತ್ತು.
ಮೊದಲೇ ಹೇಳಿದೆ ಮಲ್ಯರ ಸಹಾಯ ತುಂಬಾ ದೊಡ್ಡದು. ನಮ್ಮ ಶಿಕ್ಷಣದಲ್ಲಿ ಅವರ ಪಾತ್ರನೂ ಇದೆ. ನಮಗೆ ವರ್ಷಕ್ಕೆ ಬೇಕಾದಷ್ಟು ನೋಟ್ ಪುಸ್ತಕಗಳನ್ನು ಉಚಿತವಾಗಿ ಕೊಡುತ್ತಿದ್ದರು. ತಂದೆಯವರು ನಮ್ಮ ಶಿಕ್ಷಣಕ್ಕೆ ಎಂದೂ ಯಾವುದೇ ಕೊರತೆ ಮಾಡಲಿಲ್ಲ. ಒಂದು ಸಲ ಒಂದುವಸ್ತು ಪ್ರದರ್ಶನಕ್ಕೆ ಹೋದಾಗ ಐದು ನೂರು ರೂಪಾಯಿ(ಆ ಕಾಲದಲ್ಲಿ ಈ ಮೊತ್ತ ತುಂಬಾನೇ ಜಾಸ್ತಿ. ಈಗ ಇದು ಒಂದು ಆಟದ ಸಾಮಾನು ಖರೀದಿಸಲು ಸಾಕಾಗಲ್ಲ)ಯ ಹಲವಾರು ಪುಸ್ತಕಗಳನ್ನು ಕೊಡಿಸಿದ್ದರು. ಅವರಿಗೆ ಪುಸ್ತಕದ ಬಗ್ಗೆ ತುಂಬಾ ಪ್ರೀತಿ ಇತ್ತು. ಪುಸ್ತಕ ಓದುವ ಹವ್ಯಾಸ ಕೊನೆಯವರೆಗೂ ಜೀವಂತವಾಗಿತ್ತು. ಕಡಬದ ಗ್ರಂಥಾಲಯದಿಂದ ವಾರಕ್ಕೆ ಎರಡು ಮೂರು ಕಾದಂಬರಿ ತರುತ್ತಿದ್ದರು. ಮಕ್ಕಳಿಗೆ ಎಲ್ಲ ತರಹದ ಚಟುವಟಿಕೆಗೆ ಬೆಂಬಲ ಕೊಡುತ್ತಿದ್ದರು. ಆ ಪುಸ್ತಕ ಓದುವ ಹವ್ಯಾಸ ನನಗೆ ಬಂದಿದೆ. ಮನೆಯಲ್ಲೇ ಒಂದು ಸಣ್ಣ ಗ್ರಂಥಭಂಡಾರವನ್ನೇ ಇಟ್ಟಿರುವೆ.ಮೊದಲ ಕೆಲವು ವರುಷಗಳಲ್ಲಿ ಅಕ್ಟೋಬರ್ ಮಧ್ಯ ವಾರ್ಷಿಕ ರಜೆಗೆ ಊರಿಗೆ ಹೋಗುತ್ತಿದ್ದೆವು. ನಂತರ ಅದೇ ರಜೆಯನ್ನು ಕುಟ್ರುಪಾಡಿಯಲ್ಲೇ ಕಳೆದೆವು. ಕೇವಲ ಬೇಸಿಗೆ ರಜೆಗೆ ಊರಿಗೆ ಹೋಗುವ ಅಭ್ಯಾಸ ಬೆಳೆಯಿತು. ಒಮ್ಮೆ ಕುಟ್ರುಪಾಡಿ ಸೇರಿದರೆ ಬೇಸಿಗೆ ರಜೆಯಲ್ಲೇ ಊರಿಗೆ ಹೋಗೋದು. ಹೀಗಾಗಿ ಅದೆಷ್ಟೋ ಶುಭ-ಅಶುಭ ಸಮಾರಂಭಗಳಿಗೆ ಹೋಗಲೇ ಇಲ್ಲ.
ಓದಿನ ವಿಷಯದಲ್ಲಿ ಯಾವುದೇ ರಾಜಿ ಇರಲಿಲ್ಲ. ಓದು ಬರಹ ತಪ್ಪಿಸುವ ಪ್ರಶ್ನೆಯೇ ಇರಲಿಲ್ಲ. ನಾವು ಏಳನೇ ತರಗತಿ ಬರೋ ತನಕ ಗಣಿತದ ವಿಷಯದ ಪರೀಕ್ಷೆ ಪೇಪರ್ ಮನೆಗೆ ಬಂದ ಮೇಲೆ ಮತ್ತೆ ಬರೆದು ತೋರಿಸಬೇಕಿತ್ತು. ಅದೊಂದು ದಿನ. ಅಣ್ಣನಿಗೆ ಏಳನೇ ತರಗತಿಯ ಗಣಿತ ಪರೀಕ್ಷೆ ವಿಷಯ ಇತ್ತು . ಬೆಳಿಗ್ಗೆ ಪರೀಕ್ಷೆಗೆ ಹೋಗುವಾಗ ಲಾಭ ನಷ್ಟ ಹೇಗೆ ಮಾಡುವುದು ಎಂದು ಕಲಿಸಿಕೊಟ್ಟಿದ್ದಾರೆ. ಪರೀಕ್ಷೆಯಲ್ಲಿ ಅದೇ ತರಹದ ಪ್ರಶ್ನೆ ಬಂದಿದೆ. ಮನೆಗೆ ಬಂದ ಮೇಲೆ ಮತ್ತೆ ಬರೆದು ತೋರಿಸಿದಾಗ ಆ ಪ್ರಶ್ನೆ ತಪ್ಪು ಮಾಡಿದ್ದಾನೆ. ತಂದೆಯವರು ಹೊಡೆದ ಒಂದು ಏಟು ಇಂದಿಗೂ ನಮಗೆಲ್ಲಾ ಕಿವಿಯಲ್ಲಿ ಅನುರಣಿಸುತ್ತಿದೆ. ಅಣ್ಣ ಕೂಡ ಅದೇ ಕೊನೆ , ಆ ತರಹದ ಪ್ರಶ್ನೆಗಳನ್ನು ಮತ್ತೆ ತಪ್ಪಾಗಿ ಉತ್ತರಿಸಲಿಲ್ಲ. ಆ ಏಟು ನಮಗೆಷ್ಟು ಪಾಠ ಕಲಿಸಿತು ಎಂದರೆ , ಗಣಿತ ಆದಷ್ಟು ತಪ್ಪಾಗಿ ಬರೆಯುವ ಗೋಜಿಗೆ ಹೋಗಲಿಲ್ಲ.
ಇವರ ಅಕ್ಕನ ಮಗನ ಆಕಸ್ಮಿಕ ನಿಧನ ಅದೇಕೋ ಇವರ ಮನಸ್ಸನ್ನು ಘಾಸಿಗೊಳಿಸಿತ್ತು. ಇವರ ಮುಂದೇನೆ ಹುಟ್ಟಿದ ಅಕ್ಕನ ಮಗ ದೇವರ ಪಾದ ಸೇರಿದ್ದು ಇವರಿಗೆ ಕಣ್ಣೀರು ತರಿಸಿತ್ತು. ಅಂದೇ ಮೊದಲ ಬಾರಿ ನಾನು ಇವರ ಕಣ್ಣಲ್ಲಿ ತೇವ ಕಂಡದ್ದು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನವನ್ನು ನೀಡುವಲ್ಲಿ ಹಿಂದೆ ಬೀಳಲಿಲ್ಲ. ಬ್ಯಾಂಕ್ ಇದದ್ದು ಕಡಬದಲ್ಲಿ. ಪ್ರತಿಯೊಬ್ಬರೂ ತಿಂಗಳಿಗೆ ಒಂದು ಸಲವಾದರೂ ಬ್ಯಾಂಕಿಗೆ ಹೋಗಬೇಕಾಗಿತ್ತು. ಕೆಲವೊಮ್ಮೆ ಐವತ್ತು ರೂಪಾಯಿ ತರಲು ಅಥವಾ ಜಮಾ ಮಾಡಲು. ನಮಗೆ ಬ್ಯಾಂಕಿನ ವ್ಯವಹಾರ ತಿಳಿಯುವದರ ಜೊತೆಗೆ ಜನರ ಜೊತೆ ಸಾಮಾಜಿಕ ವ್ಯವಹಾರವೂ ಇದರ ಜೊತೆ ಬೆಳೆಯಲು ಸಹಕಾರಿಯಾಯಿತು ಅನ್ನುವುದರಲ್ಲಿ ಎರಡು ಮಾತಿಲ್ಲ. ಬ್ಯಾಂಕಿನಲ್ಲಿ ಪ್ರತಿಯೊಬ್ಬರ ಪರಿಚಯದ ಜೊತೆಗೆ ವಿವಿಧ ತರಹದ ಖಾತಾ ವ್ಯವಹಾರವೂ ಪರಿಚಿತವಾಗಿ ಹೋಗಿತ್ತು.
ಶಾಲೆ ಇವರ ಪಾಲಿಗೆ ಎರಡನೇ ಮನೆಯೇ ಸರಿ. ಇವರು ಶಾಲೆ ಸೇರಿದಾಗ ಒಂದು ಕಟ್ಟಡವೂ ಇರಲಿಲ್ಲ. ಇವರ ಸತತ ಪರಿಶ್ರಮದ ಫಲವಾಗಿ ಶಾಲೆಗೆ ಒಂದು ಪ್ರತ್ಯೇಕ ಕಟ್ಟಡದ ಅನುಮತಿ ದೊರೆತು ನಿರ್ಮಾಣವೂ ಆಯಿತು. ಅದೇ ಹೊಸ ಕಟ್ಟಡದಲ್ಲಿ ಮುಂದೆ ಒಂದು ದಿನ "ಜನ ಮೆಚ್ಚಿದ ಶಿಕ್ಷಕ" ಎಂಬ ಪ್ರಶಸ್ತಿಗೆ ಭಾಜನರಾಗಿ , ಅಭಿನಂದನೆ ಸ್ವೀಕರಿಸಿದರು ಅನ್ನೋದು ಹೆಮ್ಮೆಯ ವಿಷಯವೇ ಸರಿ. ತಮ್ಮ ಇಪ್ಪತೈದು ವರುಷದ ವೃತ್ತಿ ಜೀವನದಲ್ಲಿ ಸರಿ ಸುಮಾರು ಇಪ್ಪತ್ತು ವರುಷಕ್ಕಿಂತ ಹೆಚ್ಚು ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಅದೆಷ್ಟೋ ವರುಷ ಏಕೋಪಾಧ್ಯಾರಾಗಿ(ಮುಖ್ಯ ಗುರುಗಳಾಗಿ) ಅದೆಷ್ಟೋ ಮಕ್ಕಳ ಜೀವನ ನಿರೂಪಿಸಿದರು.
ಅವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ. ತಿಂಗಳಿಗೊಮ್ಮೆ ಸುಬ್ರಮಣ್ಯಕ್ಕೆ ಹೋಗುತ್ತಿದ್ದೆವು. ಬೆಳಿಗ್ಗೆ ಹೋದರೆ ದೇವರ ದರುಶನ, ನಂತರ ಒಂದು ಗಂಟೆ ಗ್ರಂಥಾಲಯದಲ್ಲಿ ಪಠಣ. ಮಧ್ಯಾಹ್ನ ಪೂಜೆಯ ಸಮಯಕ್ಕೆ ಮತ್ತೊಮ್ಮೆ ದೇವರ ದರ್ಶನ. ಕಾರ್ತಿಕ ಪೂಜೆ ಮಾಡಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಶಂಕರ ಮಠದಲ್ಲಿ ಬ್ರಾಹ್ಮಣ ಭೋಜನ. ನಂತರ ಉದ್ಯಾನವನದಲ್ಲಿ ನಾಲ್ಕು ಗಂಟೆಯ ತನಕ ವಿಶ್ರಾಮ. ಆ ದಿನ ಕ್ರಿಕೆಟ್ ಇದ್ದರೆ ರೇಡಿಯೋ ತಗೊಂಡು ಹೋಗುತ್ತಿದ್ದೆವು. ಅವರಿಗೆ ಕ್ರಿಕೆಟ್ ನೋಡುವುದಕ್ಕಿಂತ ಕಾಮೆಂಟರಿ ಕೇಳೋದು ಅಂದರೆ ತುಂಬಾ ಇಷ್ಟ. ಆ ಹಿಂದಿಯಲ್ಲಿ ಹೇಳುವ ಬಗೆ ಅವರಿಗೆ ತುಂಬಾ ಇಷ್ಟ ಇತ್ತು. ಸಂಜೆ ಬಸ್ ಹಿಡಿದು ಮತ್ತೆ ಮನೆ ಕಡೆಗೆ ಪಯಣ. ನಮಗೆ ಇದೆ ಒಂದು ಪಿಕ್ನಿಕ್ ತರ. ರೇಡಿಯೋ ಜೊತೆಗೆ ಅವರ ಒಳ್ಳೆಯ ತಾಳಮೇಳವಿತ್ತು. ನಮ್ಮ ಮನೆಗೆ ಟಿವಿ ಬಂದದ್ದು ನಾವು ಎಲ್ಲರೂ ಓದಿಗಾಗಿ ಮನೆಯಿಂದ ದೂರ ಹೋದಮೇಲೆ, ಆದರೆ ಹೆಚ್ಚು ಕಮ್ಮಿ ಇಪ್ಪತ್ತು ವರುಷಗಳ ಬಳಿಕ.
ನಮ್ಮ ತಂದೆಯವರಿಗೆ ಪತ್ರೊಡೆ(ಶಾವಿ ಎಲೆಯ ಒಂದು ಖಾದ್ಯ) ತುಂಬಾ ಇಷ್ಟವಾಗಿತ್ತು. ಮಲ್ಯರ ಮನೆಯಲ್ಲಿ ಪತ್ರೊಡೆ ಮಾಡಿದಾಗ ನಮ್ಮ ತಂದೆಯವರ ಸಲುವಾಗಿ ಕೊಡುತ್ತಿದ್ದರು. ಆ ರುಚಿ ಮುಂದೆ ನಮಗೂ ಇಷ್ಟವಾಗಿ ಈಗಲೂ ಆಗಾಗ ಕೊಂಕಣಿ ಹೋಟೆಲಿನಲ್ಲಿ ತಿನ್ನುತ್ತೇನೆ. ಅವರಿಗೆ ಪೂರಿ ಸಾಗು ತುಂಬಾ ಇಷ್ಟದ ಖಾದ್ಯ. ಸಾಗು ಅಂತೂ ಅವರೇ ಮಾಡುತ್ತಿದ್ದರು. ಅವರ ಕೈ ಅಡುಗೆಯ ರುಚಿ ತುಂಬಾನೇ ರುಚಿ. ನಮ್ಮ ಅಮ್ಮ ಅಂತೂ ಅಡುಗೆ ಚೆನ್ನಾಗಿಯೇ ಮಾಡುತ್ತಿದ್ದಳು. ಅವಳು ಮಾಡುತ್ತಿದ್ದ ಅಡುಗೆಯ ರುಚಿ ಟ್ಯೂಷನ್ ಗೆ ಬಂದ ಎಲ್ಲರಿಗೂ ಕೊಡದೆ ಸಮಾಧಾನವಾಗುತ್ತಿರಲಿಲ್ಲ ನಮ್ಮ ತಂದೆಯವರಿಗೆ. ಅಮ್ಮ ಮಾಡುತ್ತಿದ್ದ ಕೊಬ್ಬರಿ ಬರ್ಫಿ ಅಂತೂ ತುಂಬಾನೇ ಪ್ರಸಿದ್ದಿ ಪಡೆಯಿತು. ಮುಂದೆ ಅಮ್ಮನಿಗೆ ಎಲ್ಲರೂ ಬರ್ಫಿ ಆಂಟಿ ಅಂತಾನೆ ಕರೆಯುತ್ತಿದ್ದರು. ಎಂಟು ಗಂಟೆಗೆ ಊಟ ಮಾಡಿ ಮೊಸರನ್ನ ಮತ್ತು ಪಲ್ಯ ತಗೊಂಡು ಹೋಗುತ್ತಿದ್ದರು . ನಾವು ಕೂಡ ದೂರದ ಊರಿನ ಶಾಲೆಗೆ ಹೋಗುವಾಗ ದಿನಾಲೂ ಮೊಸರನ್ನ ಜೊತೆಗೆ ಒಂದು ಪಲ್ಯ. ತಿಂಡಿ ತಗೊಂಡು ಹೋಗುತ್ತಿದ್ದದ್ದು ತುಂಬಾ ಕಡಿಮೆ. ಇಡ್ಲಿ , ದೋಸೆ ಎಲ್ಲವೂ ಆದಿತ್ಯವಾರವಷ್ಟೇ ಹೆಚ್ಚಾಗಿ. ಇಡ್ಲಿ ಮಾಡಿದಾಗ ಸಾಂಬಾರು ಮಾಡೋದು ತಂದೆಯವರೇ.
ಹೆಚ್ಚಾಗಿ ಸಿಗುತ್ತಿದ್ದ ಪಲ್ಯಗಳೇ ಕ್ಯಾಬೇಜ್, ತೊಂಡೆ ಕಾಯಿ. ಹೀಗಾಗಿ ನಮಗೆ ಇಂದಿಗೂ ಈ ಪಲ್ಯಗಳು ವಾರ ಪೂರ್ತಿ ಮಾಡಿ ಹಾಕಿದರೂ ಇಷ್ಟ ಪಟ್ಟೇ ತಿನ್ನುತ್ತೇವೆ. ಸೊಪ್ಪುಗಳು (ಮೆಂತೆ, ಪಾಲಕ್, ಸಬಸಿ) ಸಿಗಬೇಕು ಎಂದರೆ ಪುತ್ತೂರಿಗೆ ಹೋದಾಗ ಮಾತ್ರ. ತಿಂಗಳಿಗೊಮ್ಮೆ ಏನಾದರೂ ಮೀಟಿಂಗ್ ಗೆ ಹೋದಾಗ ಸೊಪ್ಪುಗಳನ್ನು ತರುತ್ತಿದ್ದರು.
ದೂರವಾದ ಸಂಬಂಧಗಳು ಮತ್ತೆ ಹೇಗೆ ಸನಿಹಕ್ಕೆ ಬಂದವು? ಇವರು ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಹೇಗೆ ನಾಲ್ಕೂ ತರಗತಿಗಳನ್ನು ನೋಡಿಕೊಳ್ಳುತ್ತಿದ್ದರು? ಶಿಕ್ಷಕರಾಗುವ ಮುಂಚೆ ಇವರ ಮೇಲೆ ಹೊಲದಲ್ಲಿ ಹಲ್ಲೆ ಏಕೆ ನಡೆದಿತ್ತು? ಒಮ್ಮೆ ಹಾಲಿನ ಟ್ಯಾಂಕರಿನಲ್ಲಿ ಟ್ಯಾಂಕಿನ ಒಳಗೆ ಏಕೆ ಪ್ರಯಾಣ ಮಾಡಿದರು? ಇವರ ತಮ್ಮನ ಮಗನನ್ನು ಊರಿಗೆ ಏಕೆ ಕರೆದುಕೊಂಡು ಬಂದರು? ಊರಿನ ಕಡೆಗೆ ನಡೆದ ಕೆಲವು ಸಂಗತಿಗಳು, ಇವರ ಶಿಕ್ಷಕ ವೃತ್ತಿಯ ಕೆಲವೊಂದು ರೋಚಕ ಸಂಗತಿಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ.
(ಮುಂದುವರೆಯುವುದು... )...
- ದಿಲೀಪ್ ದೀಕ್ಷಿತ್
Comments
Post a Comment