ಪ್ರವಾಸದ ನೆನಪುಗಳು - ಸಂಚಿಕೆ 1

                                                ಪ್ರವಾಸದ  ನೆನಪುಗಳು - ಸಂಚಿಕೆ 1

 ಪ್ರತಿ ವರ್ಷ ಡಿಸೆಂಬರ್ ಕ್ರಿಸ್ಮಸ್ ಹತ್ತಿರ ಬಂದಂತೆ ಎಲ್ಲರಿಗೂ ರಜಾ ದಿನಗಳು ಆರಂಭವಾಗುತ್ತವೆ. ಅದರಲ್ಲೂ ಐಟಿ/ಬಿಟಿ ಯಲ್ಲಿ ಕೆಲಸ ಮಾಡುವವರಿಗೆ ವರ್ಷದ ರಜಾ ದಿನಗಳು ಡಿಸೆಂಬರ್ ತಿಂಗಳ ಕೊನೆಯ ಎರಡು ವಾರಗಳು ಮಾತ್ರವೇ. ಪ್ರತಿ ವರ್ಷ ರಜಾ ಸಮಯದಲ್ಲಿ ಚಿಕ್ಕ ಪ್ರವಾಸ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಕಳೆದ ವರ್ಷ ರಜೆ ಇದ್ದರೂ ಎಲ್ಲಿಗೂ ಹೋಗದ ಪರಿಸ್ಥಿತಿ. ಈ ವರ್ಷವಾದರೂ ಒಂದು ಸಣ್ಣ ಪ್ರವಾಸ ಮಾಡಲೇಬೇಕು ಅನ್ನೋ ಒಂದು ಆಸೆಯಂತೂ ಇತ್ತು. ಎಲ್ಲಿ ಕೇಳಿದರೂ ಕೊರೊನ ಮೂರನೇ ಅಲೆ ಮತ್ತು omricon ಸುದ್ದಿ. ಏನಾದರೂ ಆಗಲಿ ಎಂದು ಹುಚ್ಚು ಹಠ ಮಾಡಿ ನಮ್ಮ ಪ್ರವಾಸ ಆರಂಭ ಮಾಡಿದೆವು. 

Day - 1:

ಡಿಸೆಂಬರ್ ಇಪ್ಪತೈದು , ಶನಿವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು,  ಆರು ಗಂಟೆಗೆ ನಮ್ಮ ಪ್ರಯಾಣ ಆರಂಭಿಸಿದೆವು. ನಮ್ಮ ಪಯಣ ಬೆಂಗಳೂರು - ಶಿರಸಿ - ಬನವಾಸಿ- ಹುಬ್ಬಳ್ಳಿ ಕಡೆಗೆ. ತುಮಕೂರು  ಹತ್ತಿರದ "ಶ್ರೀ ನಂಜುಂಡೇಶ್ವರ" ಹೋಟೆಲ್ ಮುಟ್ಟಿದಾಗ ಏಳುವರೆ ಗಂಟೆ. ಬೆಳಗ್ಗಿನ ಉಪಹಾರ ಮುಗಿಸಿ ನಮ್ಮ ಪ್ರಯಾಣ ಮುಂದುವರೆಸಿದೆವು. ಚುಮು ಚುಮು ಚಳಿ ನಮ್ಮ ಪ್ರಯಾಣವನ್ನು ಹಿತಕರವಾಗಿಸಿತ್ತು. ಅಲ್ಲಿಂದ ಮುಂದೆ ಚಿತ್ರದುರ್ಗ, ದಾವಣಗೆರೆ , ರಾಣೇಬೆನ್ನೂರು ದಾಟಿ ಹಾವೇರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ನಮ್ಮ ಪಯಣ ಬದಲಿಸಿದೆವು. ಹಾವೇರಿಯಿಂದ ಶಿರಸಿ ಸರಿ ಸುಮಾರು 70 KM.  ಮಾರ್ಗ ಚೆನ್ನಾಗಿ ಇದ್ದರೋ ತುಂಬಾ ಕಿರಿದಾದ ಮಾರ್ಗ. ಶಿರಸಿ ಮುಟ್ಟಿದಾಗ ಗಂಟೆ 12.30. 

ಶಿರಸಿ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ ಹಾಗು ತಾಲ್ಲೂಕು ಕೇಂದ್ರವಾಗಿದೆ, ಈ ಊರಿನಲ್ಲಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಇದೆ. ಶಿರಸಿ ಮಲೆನಾಡಿನ ಹೆಬ್ಬಾಗಿಲು ಅಂತಾನು ಕರೆಯಲ್ಪಡುತ್ತದೆ. ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ದೇವಿಯ ಎತ್ತರವಾದ ಮೂರ್ತಿ ಅತ್ಯಾಕರ್ಷವಾಗಿದ್ದು ದೇವಿಯ ದರ್ಶನದಿಂದ ಮನಸ್ಸು ಆನಂದ ಹೊಂದಿತು. ಈ ದೇವಸ್ಥಾನವನ್ನು ಸೋಂದೆ ಸಂಸ್ಥಾನದವರು ಕಟ್ಟಿಸಿದ್ದಾರೆ. ದೇವಿಯ ದರುಶನ ಪಡೆದು ಅನ್ನ ಪ್ರಸಾದ ಸೇವಿಸಿದೆವು. ಅನ್ನ , ಹುಳಿ , ಸಾರು , ಒಂದು ಪಲ್ಯ , ಉಪ್ಪಿನಕಾಯಿ ಮತ್ತು ಅಕ್ಕಿ ಪಾಯಸದ ಪ್ರಸಾದ ನಮ್ಮ ಹಸಿವನ್ನು ನೀಗಿಸಿ ಮನಸ್ಸಿಗೆ ಶಾಂತಿಯನ್ನೂ ನೀಡಿತು ಎಂದರೆ ಉತ್ಪ್ರೇಕ್ಷೆಯಲ್ಲ. 

 ಅಲ್ಲಿಂದ ನಮ್ಮ ಪಯಣ ಶಿರಸಿಯಿಂದ ಸರಿಸುಮಾರು 24 KM ದೂರದಲ್ಲಿ ಇರುವ ಬನವಾಸಿಗೆ. ಬನವಾಸಿ ಕದಂಬರ ರಾಜ್ಯಧಾನಿಯಾಗಿತ್ತು.(ಕ್ರಿಸ್ತಶಕ 345-525) ಮತ್ತು ಇದು ವರದಾ ನದಿಯ ದಂಡೆಗೆ ಇದೆ. ಕದಂಬ ಸಾಮ್ರಾಜ್ಯದ ಸಂಸ್ಥಾಪಕ ಮಯೂರವರ್ಮ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ. ಮಧು ಎಂದರೆ ಜೇನು (Honey). ಇಲ್ಲಿಯ ಶಿವಲಿಂಗ ಜೇನು ಬಣ್ಣದ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಇದರಿಂದ ಹೆಸರು ಮಧುಕೇಶ್ವರ ಎಂದಾಗಿದೆ. 

ಮಧುಕೇಶ್ವರ ದೇವಾಲಯವು ಒಂದೇ ಹಂತದಲ್ಲಿ ಕಟ್ಟಿದುದಲ್ಲ.ಕ್ರಿ.ಶ.ಮೊದಲನೆಯ ಶತಮಾನದ ಶಾತವಾಹನರಿಂದ ಹಿಡಿದು ೧೮ ನೆಯ ಶತಮಾನದ ಸೋದೆ ಅರಸರು ಕಾಲಕಾಲಕ್ಕೆ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.ಈ ಗುಡಿಯಲ್ಲಿ  5 ಮಂಟಪಗಳಿವೆ ಮತ್ತು ಈ ಗುಡಿಯ ಅಭಿವೃದ್ಧಿ ಬೇರೆ ಬೇರೆ ಅರಸರಿಂದ ಮಾಡಲ್ಪಟ್ಟಿದೆ. 

5 ಮಂಟಪಗಳೆಂದರೆ,  

1. ಗರ್ಭ ಮಂಟಪ : ಕದಂಬರು ಕಟ್ಟಿಸಿದರು ಮತ್ತು  ಇಟ್ಟಿಗೆಯಿಂದ ದೇವಾಲಯದ ಛಾವಣಿ ಕಟ್ಟಲಾಗಿತ್ತು ಮುಂದೆ ರಾಷ್ಟ್ರಕೂಟರು ಅಭಿವೃದ್ಧಿಗೊಳಿಸಿದರು. 

2. ಸಂಕಲ್ಪ  ಮಂಟಪ : ಚಾಲುಕ್ಯರು ಇದನ್ನು ಕಟ್ಟಿಸಿದರು ಮತ್ತು ಆದಿ ಮಾಧವ ಮೂರ್ತಿಯನ್ನೂ ನಿರ್ಮಿಸಿದರು.

3. ತ್ರಿಲೋಕ ಮಂಟಪ: ಇದನ್ನು  ಸೋದೆಯ ಸದಾಶಿವರಾಯನು ಕಟ್ಟಿಸಿದನು. ಇದು ಮೂರು ಲೋಕಗಳನ್ನು (ಕೆಳಗೆ ನಾಗ ಅಧಿಪತಿಯಾದ ಪಾತಾಳ , ಮಧ್ಯದಲ್ಲಿ ಭೂಲೋಕ , ಮತ್ತು ಮೇಲೆ ಸ್ವರ್ಗ ಲೋಕ) ನಮಗೆ ಸಾಂಕೇತಿಕವಾಗಿ ತಿಳಿಸುತ್ತದೆ. 

4. ನೃತ್ಯ ಮಂಟಪ : ಹೊಯ್ಸಳರು ಇದನ್ನು ಕಟ್ಟಿಸಿದರು. ಇಲ್ಲಿ ಅಲ್ಲಮ ಪ್ರಭುಗಳು ಮದ್ದಳೆ ಬಾರಿಸುತ್ತಿದ್ದರು ಮತ್ತು ರಾಜನ ಮಗಳು ಮಾಯಾವತಿ ನೃತ್ಯ ಮಾಡುತ್ತಿದಳಂತೆ. ಆಗ ಮಂಟಪದ ಕಲ್ಲಿನಲ್ಲಿ ಪ್ರತಿಬಿಂಬ ಮೂಡಿ ಅದನ್ನು ಅಲ್ಲಿ ಕಂಬದ ಆ ಕಡೆ ಕೂತವರು ಆ ಬಿಂಬ ನೋಡುತ್ತಿದ್ದರಂತೆ. ಈ ಮಂಟಪದ ದುಂಡಗಿನ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ಏಕಕಾಲದಲ್ಲಿ ನೇರವಾಗಿ,ತಲೆ ಕೆಳಗಾಗಿಯೂ ಕಾಣುತ್ತದೆ. ಈಗಲೂ ಆ ಕಲ್ಲಿನಲ್ಲಿ ಒಂದು ಕೈ ಎರಡಾಗಿ ಕಾಣುತ್ತದೆ.ಇದರಲ್ಲಿ ನಿಮ್ನ ಮತ್ತು ಪೀನ ದರ್ಪಣದ ಸಂಯೋಜನೆ ಇದೆ. 

5. ನಂದಿ ಮಂಟಪ: ಇದನ್ನು  ವಿಜಯನಗರದ ಅರಸರು ಕಟ್ಟಿಸಿದರು. ನಾಟ್ಯಮಂಟಪದ ಎದುರು ೭.೫ ಅಡಿ ಎತ್ತರದ ಬೃಹತ್ ನಂದಿ ಇದೆ.ಈ ನಂದಿಯು ಎಡಗಣ್ಣಿನಿಂದ ಎದುರಿಗೆ ಶಿವನನ್ನು ಬಲಗಣ್ಣಿನಿಂದ ಪಕ್ಕದಲ್ಲಿರುವ ಪಾರ್ವತಿ ಗುಡಿಯಲ್ಲಿರುವ ಪಾರ್ವತಿಯನ್ನು ನೋಡುತ್ತಿದೆ. ಇದರ ಅರ್ಥ ಮಗ ತಂದೆಯನ್ನು ಮತ್ತು ತಾಯಿಯನ್ನು ಸರಿಸಮವಾಗಿ ನೋಡಬೇಕು ಎನ್ನುವ ಸಂಕೇತ. 

ದೇವಾಲಯದ ಪ್ರಾಂಗಣದ ದಕ್ಷಿಣ ಭಾಗದಲ್ಲಿ ಪ್ರತ್ಯೇಕವಾಗಿ ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕೂಡಿದ ಕಲ್ಲಿನ ಮಂಟಪವನ್ನು ಸೋದೆಯ ಅರಸ ರಘುನಾಥ ನಾಯಕನು ವಸಂತ ಕಾಲದಲ್ಲಿ ದೇವರ ಉಪಯೋಗಕ್ಕಾಗಿ ಮಾಡಿಸಿಕೊಟ್ಟನು. ಸದಾಶಿವರಾವ ಪೇಶ್ವೆಯವರ ಧರ್ಮಪತ್ನಿ ಪಾರ್ವತಿಬಾಯಿಯವರು ಬನವಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ದೇವರಿಗಾಗಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಮಾಡಿಸಿಕೊಟ್ಟಿದ್ದಾರೆ. ಈ ಕಂಚಿನ ಗಂಟೆಯ ಸರಿಸುಮಾರು ಒಂದು ನಿಮಿಷ ಸದ್ದು  ಮೊಳಗಿಸುತ್ತದೆ. 

ಬನವಾಸಿ ಒಂದು ಪ್ರೇಕ್ಷಣೀಯ ಸ್ಥಳವಲ್ಲದೆ ಐತಿಹಾಸಿಕ ಸ್ಥಳವೂ ಆಗಿದೆ. ಇಲ್ಲಿಂದ ನಮ್ಮ ಪಯಣ ಹುಬ್ಬಳ್ಳಿಗೆ. ಹುಬ್ಬಳ್ಳಿ ಇಲ್ಲಿಂದ ಸರಿ ಸುಮಾರು 103 KM. ಮುಂಡಗೋಡು ಮಾರ್ಗವಾಗಿ ಪ್ರಯಾಣ ಬೆಳೆಸಿ ರಾತ್ರಿ ಎಂಟು ಗಂಟೆಗೆ ತಲುಪಿದೆವು. ರಸ್ತೆ ಸ್ವಲ್ಪ ಹಾಳಾಗಿದ್ದರಿಂದ ಎರಡೂವರೆ ಗಂಟೆಯ ಪ್ರಯಾಣವಾಯಿತು. 

ಅಂತೂ ಮೊದಲ ದಿನದ ನಮ್ಮ ಪ್ರಯಾಣ ಇಲ್ಲಿಗೆ ಕೊನೆಗೊಂಡಿತು. ನಮ್ಮ ದೇಹ ಮುಂಜಾನೆಯಿಂದ ಮಾಡಿದ ಪ್ರಯಾಣದಿಂದ ಬಳಲಿದ್ದರಿಂದ ಸ್ವಲ್ಪ ವಿಶ್ರಾಂತಿಯ ಅಗತ್ಯ ಇತ್ತು. ನಿದ್ದೆ ಯಾವಾಗ ಹತ್ತಿತೋ  ಆ ದೇವರೇ ಬಲ್ಲ. 

ಮುಂದಿನ ದಿನದ ಪ್ರಯಾಣ ಯಲ್ಲಾಪುರದ ಕಡೆಗೆ.... (ಮುಂದುವರೆಯುತ್ತದೆ)

Comments

Popular posts from this blog

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ