ತಂದೆಯವರ ನೆನಪುಗಳು - ಭಾಗ 3
ಕುಟುಂಬವನ್ನು ಹೊಸ ಊರಿಗೆ ಕರೆದುಕೊಂಡುವ ನಿರ್ಧಾರವನ್ನು ಮಾಡಿದರು. ನಮ್ಮ ಅಮ್ಮನೇ , ತಂದೆಯವರ ಬದುಕು ಹೊಸ ದಾರಿ ಹಿಡಿಯಲು ಪ್ರೇರಣೆ. ಅದನ್ನು ಅವರೂ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ನಮಗೆ ಮತ್ತು ಅಮ್ಮನಿಗೆ ಅಷ್ಟೊಂದು ದೂರ ಬಸ್ಸಿನಲ್ಲಿ ಹೋಗಿಯೇ ಅಭ್ಯಾಸ ಇರಲಿಲ್ಲ. ಅದೂ ಕೆಂಪು ಬಸ್ಸಿನ ಪ್ರಯಾಣ. ಸಣ್ಣವನು ಒಂದು ವರುಷದವನು. ಎಲ್ಲರಿಗೂ ಹೊಸ ಊರದು. ಕಾಡಿನ ನಡುವೆ ಹೋದ ಅನುಭವ. ಅಂತೂ ಕೊನೆಗೆ ಜೂನ್ ನಲ್ಲಿ ಹೊಸ ಊರು ಬಂದು ಸೇರಿದೆವು. ಅಣ್ಣ ಹತ್ತಿರದ ಸರಕಾರಿ ಪ್ರಾಥಮಿಕ ಶಾಲೆಗೆ ಸೇರಿದನು.
ಮೊದಲೇ ಹೇಳಿದಂತೆ ಕರಾವಳಿಯ ಭಯಂಕರ ಜಡಿ ಮಳೆ, ಕುಡಿಯಲು ಕೊಳವೆಬಾವಿ (ಬೋರವೆಲ್)ಯ ಕಬ್ಬಿಣ ಮಿಶ್ರಿತ ನೀರು(ಮುಂದೆ ಎಷ್ಟೋ ವರುಷಗ ನಂತರ ಬಾವಿಯ ನೀರು ಬಳಸಲು ಆರಂಭಿಸಿದೆವು), ಮೇಲಿಂದ ಆಹಾರ ಪದ್ದತಿಯ ವ್ಯತ್ಯಾಸ. ಬೀದರ್ ಕಡೆ ಜೋಳದ ರೊಟ್ಟಿ, ಚಪಾತಿಯ ಬಳಕೆ ಜಾಸ್ತಿ. ಅನ್ನದ ಸೇವನೆ ತುಂಬಾ ಕಡಿಮೆ. ಅದಕ್ಕೆ ಊರಿನಿಂದ ಬರುವಾಗ ಜೋಳದ ಹಿಟ್ಟು, ಗೋಧಿ ಹಿಟ್ಟು ತಗೊಂಡು ಬಂದಿದ್ದಳು ನಮ್ಮ ಅಮ್ಮ. ಆದರೆ ಆದದ್ದೇ ಬೇರೆ. ರೊಟ್ಟಿ, ಚಪಾತಿಯ ಸೇವನೆ ಆ ವಾತಾವರಣಕ್ಕೆ ಹೊಂದಲಿಲ್ಲ. ಎಲ್ಲರಿಗೂ ಆರೋಗ್ಯ ಸಮಸ್ಯೆ ಉಂಟಾಯಿತು. ಈ ಊರನ್ನೇ ಬಿಟ್ಟು ಮತ್ತೆ ನಮ್ಮ ಊರಿಗೆ ವಾಪಸು ಹೋಗೋಣ ಅಂತ ಅನಿಸಲಾರಂಭಿಸಿದ್ದು ನಿಜ. ಆದರೆ ನಮ್ಮ ಕುಟುಂಬದ ಬಳುವಳಿ ಎಂದರೆ ಧೈರ್ಯ. ಎಂಥಹ ಸನ್ನಿವೇಶ ಬಂದರೂ ಅದನ್ನು ಎದುರಿಸುವ ಭಂಡ ಧೈರ್ಯ. ಸರಿ ಏನು ಮಾಡುವುದು. ಅದಕ್ಕಾಗಿ ಉಪಾಯ ಕಂಡು ಹಿಡಿದೆವು. ಈ ಊರಿನಲ್ಲಿ ಬದುಕ ಬೇಕೆಂದರೆ ನಮ್ಮ ಆಹಾರದ ಪದ್ಧತಿ ಬದಲಾಯಿಸಿಕೊಳ್ಳಲೇ ಬೇಕು. ಬೇರೆ ಗತಿನೇ ಇಲ್ಲ. ಚಪಾತಿ , ರೊಟ್ಟಿಯಿಂದ ದೂರವಾಗಿ ಅನ್ನ, ಅಕ್ಕಿಯ ಪದಾರ್ಥಗಳನ್ನು ಸೇವಿಸಲು ಆರಂಭಿಸಿದೆವು. ಆ ಅಭ್ಯಾಸ ಇಂದಿಗೂ ಮುಂದುವರೆದಿದೆ. ನಮ್ಮ ಅಮ್ಮ ಇಂದಿಗೂ ಅನ್ನ, ತುಪ್ಪ ಸೇವಿಸುವ ರೂಢಿ ಬೆಳೆಸಿಕೊಂಡಿದ್ದಾರೆ.
ಆಗ ದನದ ಹಾಲು ನಮಗೆ ಸಿಗಬೇಕು ಎಂದರೆ ತಂದೆಯವರು ಶಾಲೆಯಿಂದ ಬರುವಾಗ ಸಣ್ಣ ಕುಪ್ಪಿ (ಗ್ಲಾಸಿನ ಬಾಟಲಿ)ಯಲ್ಲಿ ತರಬೇಕಿತ್ತು. ಕೆಲವು ವರುಷಗಳ ನಂತರ ಬರಬರುತ್ತ ಡೇರಿ, ಮಲ್ಯರ ಮನೆಯ ದನದ ಹಾಲು ತಗೊಳ್ಳಲು ಆರಂಭಿಸಿದೆವು. ಆ ಮೊದಲ ದಿನಗಳು ತುಂಬಾ ಕಷ್ಟದಾಯಕವಾಗಿದ್ದವು. ಆ ಕಷ್ಟವೇ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ಕಷ್ಟದ ನಂತರ ಸುಖ ಬರಬೇಕೆ ವಿನಃ ಸುಖದ ನಂತರ ಕಷ್ಟವಲ್ಲ.
ಒಂದು ಸಲ ನಮ್ಮ ಅಣ್ಣನಿಗೆ ತುಂಬಾ ಜ್ವರ ಬಂದಿತ್ತು. ಆಸ್ಪತ್ರೆಗೆ ಕಡಬ (ಮೂರು ಕಿಲೋಮೀಟರು ದೂರ)ಕ್ಕೆ ಹೋಗಬೇಕಾಗಿತ್ತು. ಅಲ್ಲಿ ಒಳ್ಳೆಯ, ಹೆಸರಾಂತ ವೈದ್ಯರು ಇದ್ದರು. ಸರಿ ಅಂತ ಅಲ್ಲಿಗೆ ಹೋದರು. ಕೈಯಲ್ಲಿ ಹಣ ಅವರ ಫೀಸ್ ಗೆ ತಕ್ಕಂತೆ ಇರಲಿಲ್ಲ.ಮುಂದಿನ ಸಲ ಕೊಡುತ್ತೇನೆ ಅಂತ ಹೇಳಿದಕ್ಕೆ ಡಾಕ್ಟರ್ ಹೇಳಿದರಂತೆ, "ಹಣ ಇಲ್ಲ ಅಂದರೆ ಸರಕಾರಿ ಆಸ್ಪತ್ರೆಗೆ ಹೋಗಿ, ಇಲ್ಲಿಗೆ ಏಕೆ ಬಂದಿರಿ ಅಂತ". ಏನು ಮಾಡುವುದು .. ಬೇರೆ ದಾರಿ ಕಾಣದೆ ಅಲ್ಲಿಂದ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದರು. ಮುಂದೆ ಕೆಲವು ವರುಷಗಳ ನಂತರ ಅದೇ ವೈದ್ಯರು ತಂದೆಯವರ ಜೀವ ಬದುಕಿಸಿದರು. ಅದಕ್ಕೆ ಕಾರಣ ತಂದೆಯವರ ಹೆಸರು ಮತ್ತು ಆಗ ಅವರ ಪರಿಚಯ ಹತ್ತಿರದ ಊರುಗಳಿಗೂ ವ್ಯಾಪಿಸಿತ್ತು.
ತಂದೆಯವರಿಗೆ ಕೆಲವು ವರುಷಗಳ ನಂತರ ತುಂಬಾ ಜ್ವರ ಬಂತು. ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿ ಕೊಂಡು ಬರುತ್ತೇನೆ ಅಂತ ಬೆಳಿಗ್ಗೆ ಹತ್ತು ಗಂಟೆಗೆ ಕಡಬಕ್ಕೆ ಹೋದರು. ಮಧ್ಯಾಹ್ನ ಎರಡೂ ಗಂಟೆ ಆದರೂ ಬರಲೇ ಇಲ್ಲ. ನಮಗೆಲ್ಲ ಹೆದರಿಕೆ, ಏನಾಯಿತು ಅಂತ. ಆಗ ಈಗಿನ ಹಾಗೆ ಮೊಬೈಲ್ ಇರಲಿಲ್ಲ, ಎಲ್ಲಿ ಇದ್ದಾರೆ , ಏನು ಆಯಿತು ಅಂತ ಕೇಳೋಕ್ಕೆ. ಅಮ್ಮ , ಅಪ್ಪ ಬರಲೇ ಇಲ್ಲ ಅಂತ ಎರಡು ಗಂಟೆಗೆ ಬಸ್ ನಲ್ಲಿ ಕಡಬಕ್ಕೆ ಹೋದವರು, ಅಮ್ಮನೂ ಸಂಜೆ ಆರು ಆದರೂ ಬರಲಿಲ್ಲ. ಅಂತೂ ರಾತ್ರಿ ಏಳು ಗಂಟೆಗೆ ವಾಪಸ್ ಬಂದಾಗ, ತಂದೆಯವರ ಮುಖ ಕಪ್ಪಗಾಗಿತ್ತು, ಸುಸ್ತೋ ಸುಸ್ತು.
ಅದು ಏನಾಯಿತು ಎಂದರೆ , ಸರಕಾರಿ ಆಸ್ಪತ್ರೆಗೆ ಹೋದಾಗ , ಅಲ್ಲಿ ಇದ್ದ ವೈದ್ಯರು ನೋಡಿ, ಇವರಿಗೆ ಪೆನ್ಸಿಲಿನ್ ಇಂಜೆಕ್ಷನ್ ಕೊಟ್ಟಿದ್ದಾರೆ. ಇವರು ಹೇಳಿದರಂತೆ, ನನಗೆ ಅಲರ್ಜಿ ಇದೆ ಅಂದರೂ ಆ ಇಂಜೆಕ್ಷನ್ ಕೊಟ್ಟರು. ಕೊಟ್ಟ ಸ್ವಲ್ಪ ಸಮಯಕ್ಕೆ ಅವರಿಗೆ ರಿಯಾಕ್ಷನ್ ಆಗಿದೆ. ತಲೆ ಸುತ್ತಿ ಬಿದ್ದು ಬಿಟ್ಟಿದ್ದಾರೆ. ಅವರ ಪುಣ್ಯವೋ ಏನು, ಆ ಆಸ್ಪತ್ರೆಯಲ್ಲಿ ಅಂದೇ ತಾಲೂಕು ಮಟ್ಟದ ವೈದ್ಯರ ಸಭೆ ಇತ್ತು. ಆ ವೈದ್ಯರಲ್ಲಿ , ನಾನು ಮೇಲೆ ಹೇಳಿದ ವೈದ್ಯರು ಕೂಡ ಇದ್ದರು. ಅವರ ಇವರ ಹೆಸರು ಕೇಳಿ, ಇವರು ನಮಗೆ ಗೊತ್ತಿರೋ ಶಿಕ್ಷಕರು ಅಂತ ಇವರನ್ನು ಉಪಚರಿಸಿದ್ದಾರೆ. ಅವರ ಋಣ ನಮ್ಮ ಮೇಲೆ ತುಂಬಾ ದೊಡ್ಡದು. ಸಮಯಕ್ಕೆ ಸರಿಯಾಗಿ ನಮ್ಮ ತಂದೆಯವರ ಪ್ರಾಣ ಉಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಇವರಿಗೆ ಪ್ರಜ್ಞೆ ವಾಪಸ್ ಬಂದಿದೆ. ಸ್ವಲ್ಪ ಸಮಯ ವಿಶ್ರಾಂತಿ ತಗೊಂಡು, ಇನ್ನೇನೂ ಪ್ರಾಣಕ್ಕೆ ಅಪಾಯ ಇಲ್ಲ ಅಂತ ಹೇಳಿ ಅದೇ ವೈದ್ಯರು ಮನೆಗೆ ಹೋಗಲು ತಿಳಿಸಿದಾಗ, ತಂದೆಯವರು ಮೃತ್ಯುವಿನ ದವಡೆಯಿಂದ ಪಾರಾಗಿ ಬಂದೆ ಅಂತ ಆ ವೈದ್ಯರಿಗೆ, ದೇವರಿಗೆ ತಮ್ಮ ಧನ್ಯವಾದ ತಿಳಿಸಿದ್ದಾರೆ.
ಮುಂದೆ ಆ ವೈದ್ಯರೇ ಊರು ಬಿಡೋ ತನಕ ನಮ್ಮ ಮನೆಯ ವೈದ್ಯರು (ಫ್ಯಾಮಿಲಿ ಡಾಕ್ಟರ್) ಆಗಿದ್ದರು. ಆಗಿನಿಂದ ಹಣಕ್ಕಾಗಿ ಎಂದೂ ಒತ್ತಾಯ ಮಾಡಲಿಲ್ಲ. ತುಂಬಾ ಉತ್ತಮವಾದ ಆತ್ಮೀಯ ಸಂಬಂಧ ಬೆಳೆಸಿದ್ದರು. ದೀಕ್ಷಿತ್ ಮಾಸ್ಟ್ರು ಕುಟುಂಬದವರು ಯಾರೇ ಅವರ ಬಳಿ ಹೋದಾಗ ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಿದ್ದರು. ಫೀಸ್ ಕೂಡ ತುಂಬಾ ಕಡಿಮೆ ತಗೊಳ್ಳುತ್ತಿದ್ದರು. ಹೊಸ ಊರಿನಲ್ಲಿ ಇಂತಹ ಒಂದು ಪ್ರಖ್ಯಾತ ವೈದ್ಯರ ಸಹಕಾರ ಸಿಕ್ಕಿದಕ್ಕೆ ಅವರಿಗೆ ನಾವು ಇಂದಿಗೂ ಋಣಿ.
ಇನ್ನೊಂದು ಜೀವನದ ಪಾಠ ನಮ್ಮ ತಂದೆಯವರನ್ನು ಹುಡುಕಿ ಕೊಂಡು ಬಂದಿತು. ಅವರ ಹತ್ತಿರದ ಸಂಬಂಧಿಕರು ಒಬ್ಬರು ಇವರಿಗೆ ಒಳ್ಳೆಯ ಊಟ ಮಾಡಿಸಿ, ಸಿಹಿ ಕೊಟ್ಟು ಒಂದು ಖಾಲಿ ಕಾಗದದ ಮೇಲೆ ಇವರ ಸಹಿ ತಗೊಂಡರು. ಯಾವುದೊ ಒಂದು ಕೆಲಸಕ್ಕೆ ಬೇಕು ಅಂತ. ಸಂಬಂಧಿಕರ ಮೇಲೆ ಅಪಾರ ನಂಬಿಕೆ ಇದ್ದ ಕಾರಣ ಇವರೂ ಯಾವ ಕೆಲಸಕ್ಕೆ ಅಂತ ಕೇಳಲೇ ಇಲ್ಲ. ಇದಾಗಿ ಕೆಲವು ತಿಂಗಳುಗಳ ನಂತರ ಇವರ ಸಂಬಳದಲ್ಲಿ ಕಡಿಮೆ ಮೊತ್ತ ಬಂದಿತು. ಯಾಕೆ ಎಂದು ಬ್ಯಾಂಕಿನಲ್ಲಿ ಕೇಳಿದರೆ ಇವರ ಹೆಸರ ಮೇಲೆ ಯಾವುದೊ ಸಾಲ ತಗೊಳ್ಳಲಾಗಿದೆ, ಇದರಿಂದ ಸಾಲದ ಮೊತ್ತ (EMI )ಸಂಬಳದಲ್ಲಿ ಹಿಡಿಯಲಾಗಿದೆ ಅಂತ. ಮುಂದಿನ ಎರಡು ಮೂರು ವರ್ಷ ಸಾಲ ಕಟ್ಟಬೇಕಾಯಿತು. ಆದರೆ ಯಾಕೆ ಹೀಗೆ ಮಾಡಿದಿರಿ ಅಂತ ಸಂಬಂಧಿಕರನ್ನು ಕೇಳುವ ಗೋಜಿಗೆ ಹೋಗಲೇ ಇಲ್ಲ.
ಈ ಕೆಟ್ಟ ಅನುಭವವನ್ನು ಅವರು ನಮಗೆ ಹೇಳುತ್ತಾ, " ನಾನು ಮಾಡಿದ ತಪ್ಪು ನೀವು ಮಾಡಬೇಡಿ", ಯಾವುದೇ ಖಾಲಿ ಕಾಗದಕ್ಕೆ ಯಾರೇ ಹೇಳಿದರೂ, ಯಾವುದೇ ಸಂದರ್ಭದಲ್ಲಿ ಕೂಡ ಸಹಿ ಹಾಕಬೇಡಿ. ಯಾವುದೇ ಕಾಗದಕ್ಕೆ ಸಹಿ ಹಾಕುವ ಮೊದಲು ಎರಡು ಸಲ ಓದಿ , ಅರ್ಥ ಮಾಡಿಕೊಂಡು ಸಹಿ ಹಾಕಿ ಅಂತ ಪದೇ ಪದೇ ಹೇಳುತ್ತಿದ್ದರು. ಈ ಪಾಠ ಅವರಿಗೆ ಜೀವನದಲ್ಲಿ ಇನ್ನಷ್ಟು ಎಚ್ಚರದಿಂದ ಹೇಗೆ ಸಂಬಂಧ ನಿಭಾಯಿಸಬೇಕು ಅಂತ ಅವರಿಗೆ ಕಲಿಸಿತು. ಆ ಪಾಠ ನಮಗೂ ಕೊಡ ಜೀವನದ ಒಂದು ಭಾಗವಾಗಿದೆ.
ಶಿಕ್ಷಕ ವೃತ್ತಿ ಎನ್ನುವುದು ತುಂಬಾ ಗೌರವಯುತವಾದ ವೃತ್ತಿ. ಒಂದು ವಿದ್ಯಾರ್ಥಿಯ ಇಡೀ ಜೀವನವನ್ನು ನಿರೂಪಿಸುತ್ತಾರೆ . ನಮ್ಮ ತಂದೆಯವರಿಗೆ ಮೊದಲಿಂದಲೂ ಗಣಿತ ತುಂಬಾ ಪ್ರೀತಿಯ ವಿಷಯ. ಗಣಿತದ ಯಾವುದೇ ಪ್ರಶ್ನೆಗೆ ಉತ್ತರ ಸದಾ ಅವರಿಗೆ ಗೊತ್ತಿತ್ತು. ಸುಲಭ ವಿಧಾನಗಳು, ಮಗ್ಗಿ ಅಂತೂ ಅವರಿಗೆ ಕರಗತವಾಗಿತ್ತು. ಮಗ್ಗಿ ಅವರು ಕಲಿತದ್ದು ಮರಾಠಿಯಲ್ಲಿ, ಹೀಗಾಗಿ ಕೊನೆಯ ತನಕವೂ ಮಗ್ಗಿಯನ್ನು ಮರಾಠಿಯಲ್ಲೇ ಹೇಳುತ್ತಿದ್ದರು. ರೇಖಾಗಣಿತದಲ್ಲಿ ಎತ್ತಿದ ಕೈ. ಲಾಭ-ನಷ್ಟ ಶೇಕಡಾವಾರು ಲೆಕ್ಕಾಚಾರ ತುಂಬಾ ಸುಲಭ ವಿಧಾನದಲ್ಲಿ ಹೇಳಿಕೊಡುತ್ತಿದ್ದರು. ಆ ಪದ್ದತಿಯನ್ನು ಮುಂದೆ ಕೆಲವು ಶಿಕ್ಷಕರು ಅಳವಡಿಸಿಕೊಂಡರು. ಮಲ್ಯರ ಮನೆಯವರು ತಮ್ಮ ಮಗಳನ್ನು ಗಣಿತ ಕಲಿಸಿಕೊಡುವ ಸಲುವಾಗಿ ಕಳಿಸಿದರು. ಅವಳೇ ನಮ್ಮ ಮನೆಯ ಟ್ಯೂಷನಿನ ಮೋಡಲ್ ಶಿಷ್ಯೆ " ಸುಮನಕ್ಕ". ಅಲ್ಲಿಂದ ಶುರುವಾದ ಟ್ಯೂಷನ್, ಹಲವಾರು ಮಕ್ಕಳ ಭವಿಷ್ಯವನ್ನು ನಿರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಮುಂದೆ ನಮ್ಮ ಅಮ್ಮ ಇಂಗ್ಲಿಷ್ ಹೇಳಿಕೊಟ್ಟರೆ, ನಾವು ಕೂಡ ತಂದೆಯವರಿಗೆ ಸಹಾಯ ಮಾಡುತ್ತಿದ್ದೆವು. ಅವರೆಂದೂ ಹಣಕ್ಕಾಗಿ ಟ್ಯೂಷನ್ ಮಾಡಲಿಲ್ಲ. ಯಾರ ಹತ್ತಿರನೂ ಟ್ಯೂಷನ್ ಫೀಸ್ ಕೇಳುತ್ತಿರಲಿಲ್ಲ. ತಮಲ್ಲಿ ಇರೋ ವಿದ್ಯೆಯನ್ನು ಹಂಚಿಕೊಳ್ಳುವ ಅವಕಾಶ ಇದು ಅನ್ನುತ್ತಿದ್ದರು.
ಅವರ ಟ್ಯೂಷನ್ ವಿಧಾನ ಸ್ವಲ್ಪ ಇತರರಿಗಿಂತ ಬೇರೆ. ಪ್ರತಿದಿನವೂ ಕೂಡ ಮಗ್ಗಿ ಬರೆದುಕೊಂಡು ಬರಲೇಬೇಕು. ದಿನದ ಲೆಕ್ಕ ಅಥವಾ ಹೋಂ ವರ್ಕ್ ಬೇರೆ. ಅವರ ಪ್ರಕಾರ ಮಗ್ಗಿ ಬಂದರೆ ಯಾವುದೇ ಲೆಕ್ಕ ಮಾಡಬಹುದು. ನನಗೆ ಹೈಸ್ಕೂಲ್ನಲ್ಲಿ ಕೂಡ ನಮ್ಮ ಗಣಿತ ಮಾಸ್ಟ್ರು "ಸತೀಶ್ ಭಟ್ ಸರ್" ಕೂಡ ಮಗ್ಗಿ ಕೇಳುತ್ತಿದ್ದರು. ಅವರ ಪ್ರಕಾರ ಕೂಡ ಮಗ್ಗಿ ಅನ್ನೋದು ಗಣಿತದ ಪ್ರಾಥಮಿಕ ಅಂಗ. ಮಗ್ಗಿ ಬರೆಯದೆ ಬಂದರೆ ಆ ದಿನ ನಮ್ಮಲ್ಲೇ ಟ್ಯೂಷನಲ್ಲಿ ಕುಳಿತು ಬರೆಯಬೇಕು. ಅದರ ಜೊತೆಗೆ ಸಣ್ಣ ಮಟ್ಟಿನ ಶಿಕ್ಷೆ ಕೊಡುತ್ತಿದ್ದರು. ಅವರು ಏನಾದರೂ ಹೆದರಿಸಿದರೆ, ಇಡೀ ಶಾಲೆಯೇ ಹೆದರುತ್ತಿತ್ತು. ಅಂತ ಗಾಂಭೀರ್ಯವಾದ ಧ್ವನಿ ಅವರದು. ಒಂದು ಸಲ, ಒಬ್ಬ ಹುಡುಗ ಈ ಮಗ್ಗಿ ಬರೆಯಬೇಕು ಅನ್ನೋದು ಕೇಳಿಯೇ, ಮತ್ತೆ ಟ್ಯೂಷನ್ ಕಡೆಗೆ ತಲೆ ಹಾಕಿಲ್ಲ. ಹಲವಾರು ಟ್ಯೂಷನ್ ಪ್ರಸಂಗಗಳು ಇವೆ.ಮುಂದಿನ ಕೆಲವು ಸಂಚಿಕೆಗಳಲ್ಲಿ ಅದರ ಬಗ್ಗೆ ಬರೆಯುತ್ತೇನೆ.
ಇದರ ನಡುವೆ ಏಕೆ ಕೆಲವು ಹತ್ತಿರದ ಸಂಬಂಧಗಳು ದೂರವಾದವು? ಮತ್ತೆ ಹೇಗೆ ಅದೇ ಸಂಬಂಧಗಳು ಮತ್ತೆ ಹತ್ತಿರವಾದವು? ನಮ್ಮ ನೆರೆಹೊರೆಯವರ ಜೊತೆ ಹೇಗೆ ಆತ್ಮೀಯತೆ ಬೆಳೆಯಿತು? ಅಲ್ಲಿಯ ತನಕ ಎಂದೂ ತಂದೆಯವರ ಕಣ್ಣೀರು ನೋಡದ ನಮಗೆ ಆ ದಿನ ಏಕೆ ಅವರ ಕಣ್ಣೀರು ಕಾಣಿಸಿತು? ಇವರು ಶಾಲೆಗಾಗಿ ಪಟ್ಟ ಕಷ್ಟವೇನು? ಮಕ್ಕಳ ಶಿಕ್ಷಣದಲ್ಲಿ ಇವರ ಪಾತ್ರವೇನು? ಅದೇಕೆ ಒಂದು ದಿನ ನಮ್ಮ ಅಣ್ಣನಿಗೆ ದಿನದಲ್ಲಿಯೇ ಸೂರ್ಯ ಚಂದ್ರ ಕಾಣಿಸಿದ್ದು ಏಕೆ? ಅದರಿಂದ ನಾವು ಕಲಿತದ್ದು ಏನು? ನಮ್ಮನ್ನು ಬ್ಯಾಂಕಿಗೆ ಕಳಿಸುವುದರ ಹಿಂದಿನ ಉದ್ದೇಶ ಏನಿತ್ತು? ಮತ್ತಷ್ಟು ಪ್ರಶ್ನೆಗಳು ...!!
ಈ ಪ್ರಶೆಗಳಿಗೆ ಉತ್ತರ ಮುಂದಿನ ಸಂಚಿಕೆಯಲ್ಲಿ.... (ಮುಂದುವರೆಯುವುದು... )...
- ದಿಲೀಪ್ ದೀಕ್ಷಿತ್
Comments
Post a Comment