ತಂದೆಯವರ ನೆನಪುಗಳು - ಭಾಗ ೨

 ಮೊದಲ ಭಾಗದಲ್ಲಿ ಹೇಳಿದಂತೆ 1985 ಇಸವಿ ತಂದೆಯವರ ಜೀವನವನ್ನೇ ಬದಲಾಯಿಸಿತು ಎಂದು ಹೇಳಿದ್ದೆ. ತಂದೆಯವರ ಅಪ್ಪ ಅಮ್ಮನವರ ದೇಹಾಂತದ ನಂತರ ಕೆಲವು ತಿಂಗಳು ಕಳೆದ ಮೇಲೆ ನಮ್ಮ ದೊಡ್ಡಪ್ಪ/ತಂದೆಯವರ ಅಣ್ಣ (ಪ್ರೊಫೆಸರ್ ಕೃಷ್ಣಾ ದೀಕ್ಷಿತ್, ಉಡುಪಿ ಅವರು) ಹಳ್ಳಿಖೇಡಕ್ಕೆ ಬಂದಾಗ ನಮ್ಮ ಅಮ್ಮ , "ನಮ್ಮ ಮನೆಯವರಿಗೆ ಎಲ್ಲಾದರೂ ಒಂದು ಕೆಲಸ ನೋಡಿ" ಅಂತ ಹೇಳಿದರಂತೆ.  ಅದೇ ಸಮಯಕ್ಕೆ ಸರಿಯಾಗಿ ಕರ್ನಾಟಕ ಸರಕಾರ ಹೊಸ ಶಿಕ್ಷಕರ ನೇಮಕಕ್ಕೆ ಸೂಚನೆ ಹೊರಡಿಸಿತು. ಅವರ ಅಣ್ಣನವರ ಸಹಾಯದ ಫಲವಾಗಿ , ಶಿಕ್ಷಕರ ಸೂಚಿಯಲ್ಲಿ ನಮ್ಮ ತಂದೆಯವರ ಹೆಸರು ಬಂದಿತ್ತು. ಆಗ ಜೂನ್ ತಿಂಗಳು. ನನ್ನ ತಮ್ಮ ಹುಟ್ಟಿ ಅಂದಿಗೆ ಸರಿಯಾಗಿ ೧೦ ದಿನ. ಇವರಿಗೆ ನೇಮಕಾತಿಯ ಪತ್ರ ಬಂದು ತಲುಪಿತು ಮತ್ತು ಒಂದು ವಾರದಲ್ಲಿ ಸೇರುವಂತೆ ಸೂಚಿಸಲಾಗಿತ್ತು.

ಯಾವ ಊರಿಗೆ ಪಯಣ ಅಂತ ನೋಡಿದರೆ ಗೊತ್ತೇ ಇರದ, ಅಂದಿನ ತನಕ ಕೇಳದೆ ಇದ್ದ ಊರದು. ಕರ್ನಾಟಕ ಮ್ಯಾಪಿನಲ್ಲಿ ಹುಡಿಕಿದರೂ ಕಣ್ಣಿಗೆ ಕಾಣಿಸದ ಊರದು. ಅವರ ಪಾಲಿಗಂತೂ ಕುಗ್ರಾಮವೇ ಸರಿ. ಆ ಊರಿನ ಹೆಸರು " ಕಾರ್ಕಳ" . ಕಾರ್ಕಳ ಎಂದರೆ ಗೋಮಟೇಶ್ವರನ ಊರು, ತಾಲೂಕು ಜಾಗ ಅಂತ ಅಂದುಕೊಂಡಿರುವವರು ಇದ್ದಾರೆ.  ನಾನು ಹೇಳಲು ಹೊರಟ ಊರು ಅದಲ್ಲ. ದಕ್ಷಿಣ ಕನ್ನಡದ ಕಾರ್ಕಳ ಎಂಬ ಕಿರಿಯ ಪ್ರಾಥಮಿಕ  ಶಾಲೆಗೆ  ಅಧ್ಯಾಪಕರಾಗಿ ನೇಮಕಗೊಂಡಿದ್ದರು.  ಆ ಸ್ಕೂಲಿಗೆ ಏಕೋಪಾಧ್ಯಯರು.  ಹೇಗಿದ್ದ ಶಾಲೆ ಹೇಗೆ ಬದಲಾಯಿತು, ಇವರು ಆ ಶಾಲೆಗಾಗಿ ಪಟ್ಟ ಕಷ್ಟಗಳು ಎಷ್ಟು? ಆ ಶಾಲೆಯ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ವಿಸ್ತಾರವಾಗಿ ಬರೆಯುತ್ತೇನೆ.

ಕಾರ್ಕಳ ಅನ್ನೋದು ಪುತ್ತೂರು ತಾಲೂಕಿನ ಕುಟ್ರುಪಾಡಿ ಊರಿನಿಂದ ೫  ಕಿಲೋ ಮೀಟರ್ ದೂರದ ಒಂದು ಸಣ್ಣ ಊರು. ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬರೇ ಉಡುಪಿಗೆ ಬಂದು, ಅಲ್ಲಿಂದ ಕುಟ್ರುಪಾಡಿಗೆ ಬಂದು ಇಳಿದರು. ಹೊಸ ಊರು, ನವೀನವಾದ ವಾತಾವರಣ.  ಬಿರುಬಿಸಿಲು, ಕೊರೆಯುವ ಛಳಿಯ , ಅಪರೂಪಕೊಮ್ಮೆ ಮಳೆ ಕಾಣುವ ಬೀದರ್ ಎಲ್ಲಿ,  ಈ ಹೊಸ ಊರೆಲ್ಲಿ. ಜೂನ್ ತಿಂಗಳಿನಲ್ಲಿ ಕರಾವಳಿಯ ಮಳೆ ಹೇಳತೀರದು. ನಾಲ್ಕು ತಿಂಗಳು ಸೂರ್ಯನ ದರುಶನವೇ ವಿರಳ.

ಬೀದರ್ ಊರಿಂದ ಬರುವಾಗ ಹೇಳಿದರಂತೆ, ಒಂದು ವರುಷ ಅಲ್ಲಿ ಇದ್ದು ನಂತರ ಊರಿನ ಹತ್ತಿರದ ಶಾಲೆಗೆ  ವರ್ಗಾವಣೆ  ತಗೊಂಡು ಬರುತ್ತೇನೆ ಅಂತ. ಇದಕ್ಕೆ ಅಲ್ಲವೇ ವಿಧಿ ಬರಹ ಅನ್ನೋದು!!. ಹಾಗೆ ಹೇಳಿದವರು ಸರಿ ಸುಮಾರು ಇಪ್ಪತೈದು ವರುಷ ಆ ಊರಿನಲ್ಲೇ ತಮ್ಮ ಜೀವನವನ್ನು ಕಳೆದರು.

ಸರಿ ಹೊಸ ಊರಿಗೆ ಬಂದು ಎಲ್ಲಿ ಇರೋದು ಎಂಬ ಚಿಂತೆ. ದೇವರು ಸಹಾಯ ಮಾಡೋವಾಗ ಎಲ್ಲ ರೀತಿಯಲ್ಲಿ, ಯಾರದೂ ರೂಪದಲ್ಲಿ ಸಹಾಯ ಮಾಡುತ್ತಾರೆ ಅಂತ ಹೇಳೋದಿದೆ. ಅದರಂತೆ ಅವರ ಮೊದಲ ಭೇಟಿ ಶ್ರೀ ಸುರೇಂದ್ರ ಮಲ್ಯರ ಜೊತೆ ಆಯಿತು. ಮಲ್ಯರು ಒಂದು ಅಂಗಡಿ ನಡೆಸುತ್ತಿದ್ದರು, ಆ ಅಂಗಡಿ ಇಂದಿಗೂ ಇದೆ. ಅವರ ಮೊದಲ ಭೇಟಿ ದಿನ ಕಳೆದಂತೆ ಆತ್ಮೀಯ ಸಂಬಂಧವಾಗಿ ಬದಲಾಯಿತು. ಆ ಸಂಬಂಧ ಇಂದಿನವರೆಗೂ ಗಾಢವಾಗಿ ಮುಂದುವರೆದಿದೆ. ಅವರು ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಕುಟುಂಬದವರ ಋಣ ತೀರಿಸಲು ಸಾಧ್ಯವೇ ಇಲ್ಲ. ಅವರ ಮನೆಯಲ್ಲಿ ಆ ರಾತ್ರಿಯನ್ನು ಕಳೆದರು. ಮರುದಿನ ತಮ್ಮ ಹೊಸ ಶಾಲೆಗೆ ಹೋಗಿ ಹೊಸ ಶಿಕ್ಷಕ ವೃತ್ತಿಯ ಜೀವನ ಆರಂಭಿಸಿದರು. ಜೂನ್ ಏಳು ೧೯೮೫ ಆ ದಿನ.

ಒಬ್ಬ ರೈತನಾಗಿ, ಬ್ರಾಹ್ಮಣ ವೃತ್ತಿ ಮಾಡಿದವರು, ಎಂದೂ ಕನಸಿನಲ್ಲಿ ಶಿಕ್ಷಕನಾಗುತ್ತೇನೆ ಅಂತ ಅಂದುಕೊಂಡಿರದವರು ಇಂದು ಹೊಸ ಜೀವನ ಆರಂಭಿಸಿದರು. ಮುಂದೆ ಅದೆಷ್ಟೋ ಮಕ್ಕಳ ಭವಿಷ್ಯ ರೂಪಿಸಿದರು. ತಮ್ಮ ಮಕ್ಕಳ ಜೊತೆ ಜೊತೆಗೆ ಇತರ ಮಕ್ಕಳಿಗೂ ಕೂಡ  ಒಳ್ಳೆಯ ಸಂಸ್ಕಾರದ ಜೊತೆಗೆ , ಒಳ್ಳೆಯ ಶಿಕ್ಷಣ ಕಲಿಸುವಲ್ಲಿ ವಹಿಸಿದ ಪಾತ್ರ ತುಂಬಾ ಇದೆ.  ಮಕ್ಕಳಿಗೆ ಅಷ್ಟೇ ಅಲ್ಲದೆ ಕಿರಿಯ ಶಿಕ್ಷಕರಿಗೂ ಉತ್ತಮ ಮಾರ್ಗದರ್ಶಕರಾಗಿ, ತಮ್ಮ ಅನುಭವದ ಧಾರೆ ಎರೆದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಜನ ಮೆಚ್ಚಿದ , ಊರು ಮೆಚ್ಚಿದ ಶಿಕ್ಷಕರಾಗಿ , ಇಪ್ಪತ್ತೆದು ವರ್ಷಗಳ ವೃತ್ತಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರದೇ ಜೀವನ ಸಾಗಿಸಿದರು.

ಇವರಿಗಂತೂ ಈ ತರದ ವಾತಾವರಣದಲ್ಲಿ ಇರೋದು ಹೇಗೆ ಎಂಬ ಚಿಂತೆ. ಮುಂದೆ ಶ್ರೀ ರಘುನಾಥ ಭಟ್ ಅವರ ಭೇಟಿ ಆಗಿ ಒಂದು ಸಣ್ಣ ಮನೆ ಬಾಡಿಗೆಗೆ ಹಿಡಿದರು. ಅದು ಒಂದು ಸಣ್ಣ ಮನೆ, ಒಂದೇ ಕೋಣೆ. ಊರು ಬಿಡುವ ತನಕವೂ ಅದೇ ಮನೆಯಲ್ಲಿ ವಾಸವಾಗಿದ್ದರು. ಕಾರ್ಕಳ ಶಾಲೆ ಮೊದಲೇ ಹೇಳಿದಂತೆ ಕುಟ್ರುಪಾಡಿಯಿಂದ ಐದು ಕಿಲೋಮೀಟರು. ಕಾಡಿನ ನಡುವೆ ನಡೆದು ಹೋಗಬೇಕಾಗಿತ್ತು( ಬೇರೆ ದಾರಿನೇ ಇರಲಿಲ್ಲ, ವಾಹನಗಳಂತೂ ವಿರಳವೇ ಸರಿ ). ಅಲ್ಲಿ ಒಂದು ಮನೆಯಿಂದ ಇನ್ನೊಂದು ಮನೆ ತುಂಬಾ ದೂರದಲ್ಲಿ ಇರುತ್ತವೆ.  ಕಾಡು, ಬಯಲು , ನಿರ್ಜನ ಪ್ರದೇಶ , ನೀರಿನ(ತೋಡು ಅಥವಾ ಸಣ್ಣ ನೀರು ಹೋಗೋ ಜಾಗ) ನಡುವೆ ಪಯಣ, ಮೇಲಿಂದ ಮಳೆ, ಕೆಳಗೆ ತೋಡಿನಲ್ಲಿ ನೀರು. ಅದೇಗೆ ನಡೆದು ಹೋಗುತ್ತಿದ್ದರೋ ಆ ದೇವರೇ ಬಲ್ಲ.  ದಿನ ಕಳೆದಂತೆ ಆ ಹೊಸ ವಾತಾವರಣಕ್ಕೆ ಹೊಂದಿಕೊಂಡರು.ಮಳೆಗಾಲದಲ್ಲಿ ಒಂದು ಕಡೆ ಕೊಡೆ, ಇನ್ನೊಂದು ಕೈಯಲ್ಲಿ ಊಟದ ಚೀಲ, ಇನ್ನು ಪ್ಯಾಂಟ್ ಹಾಕಿಕೊಂಡರೆ ಅದನ್ನೂ ಸರಿ ಮಾಡಿಕೊಂಡು ಹೋಗಬೇಕು.. ಕೆಸರು ಬೇರೆ. ಅದಕ್ಕೆ ಮಳೆಗಾಲದಲ್ಲಿ ಲುಂಗಿ ಹಾಕಿಕೊಂಡು ಹೋಗುವ ಪದ್ಧತಿ ಅಳವಡಿಸಿಕೊಂಡರು.

ಮೊದಲೇ ಹೇಳಿದಂತೆ ಕುಟ್ರುಪಾಡಿ ಒಂದು ಥರ ಸಣ್ಣ ಕಾಡಿನಂತೆ ಇತ್ತು. ಸುತ್ತಲೂ ಮರ ಗಿಡಗಳು , ಮನೆಯ ಹತ್ತಿರ ನೀರಿನ ಕಾಲುವೆ, ಚಿತ್ರ ವಿಚಿತ್ರ ಜಂತುಗಳು , ಹಾವುಗಳು. ವಿದ್ಯುತ ಇರಲಿಲ್ಲ. ನಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕ ಬಂದದ್ದು ಸರಿ ಸುಮಾರು ಹತ್ತು ವರುಷಗಳ ನಂತರ. ಅಲ್ಲಿ ತನಕ  ಸಣ್ಣ ದೀಪಗಳೇ ನಮ್ಮ ಮನೆಯ ಅಲಂಕಾರದ ವಸ್ತುಗಳು.

ಈ ಘಟನೆ ಆದದ್ದು ಅವರು ಅಲ್ಲಿಗೆ ಹೋದ ಕೆಲವೇ ತಿಂಗಳುಗಳಲ್ಲಿ. ಒಂದು ದಿನ ಹೀಗೆ ರಾತ್ರಿ ಹತ್ತು ಆಗಿರಬಹುದು. ಒಬ್ಬರೇ ಮನೆಯಲ್ಲಿ ಸುದ್ದಿ ಪತ್ರಿಕೆ ಓದುತ್ತ ಹಾಸಿಗೆ ಮೇಲೆ ಕುಳಿತಿದ್ದರು. ಮನೆಯೊಳಗೇ ಏನೋ ಸರಸರ ಹೋದ ಹಾಗೇ ಆಗಿದೆ. ಸುತ್ತ ಕತ್ತಲು. ಇನ್ನೂ ಮನೆಯಲ್ಲಿ ಒಂದೇ ಒಂದು ಟಾರ್ಚ್ ಇರದ ಸಮಯವದು. ಅವರಿಗೆ ಹಾವು ಮನೆಯೊಳಗೇ ಹೊಕ್ಕಿದೆ ಎಂಬ ಅನುಮಾನ ಬಂದಿದೆ. ಏನು ಮಾಡುವುದು, ಯಾರನ್ನಾದರೂ ಕರೆಯೋಣ ಎಂದರೆ ಎಲ್ಲರೂ ಮಲಗಿ ಸಮಯವೇ ಆಯಿತು.  ಕೊನೆಗೆ ಇದ್ದ ಸಣ್ಣ ದೀಪವನ್ನು ಹಚ್ಚಿ, ಮನೆಯ ಬಾಗಿಲು ಹಾಕಿ ಜಗಲಿ ಮೇಲೆ ಕುಳಿತರಂತೆ.  ರಾತ್ರಿ ಇಡೀ ನಿದ್ದೇನೆ ಮಾಡಲಿಲ್ಲ. ಬೆಳಿಗ್ಗೆ ಐದು ಆಗಿದೆ. ಪಕ್ಕದ ಮನೆಯ ಹುಡುಗ ಇವರನ್ನು ನೋಡಿ, ಏನು ಸರ್ ಹೀಗೆ ಹೊರಗೆ ಕುಳಿತಿದ್ದೀರಿ ಅಂತ ಕೇಳಿದನಂತೆ. ಅವರು ಇದ್ದ ಸುದ್ದಿ ಹೇಳಿದರು. ಅವನು ಮನೆಗೆ ಹೋಗಿ ದೊಡ್ಡ ಟಾರ್ಚ್, ಬಡಿಗೆ ತಗೊಂಡು ಬಂದು ನೋಡಿದಾಗ ಮೂಲೆಯಲ್ಲಿ ಒಂದು ದೊಡ್ಡ ಹಾವು ಮಲಗಿದೆ. ಇಬ್ಬರೂ ಸೇರಿ ಅದನ್ನು ಹೊಡೆದು ಹಾಕಿದರು. ನೋಡಿದರೆ ಅದು ತುಂಬಾ ವಿಷಕಾರಿಯಾದ  ಹಾವು, ಕನ್ನಡಿ ಹಾವು ಅಂತ. ಅಂತೂ ದೇವರ ದಯದಿಂದ ಬಚಾವು ಆದರು.

ಆಗ ಅವರು ಬೇಳೆ ಮತ್ತು ಅನ್ನ ತಿನ್ನುತ್ತಿರಲಿಲ್ಲ. ಕುಲ ದೇವರ ದರುಶನವಾಗದೆ ತಿನ್ನಲ್ಲ ಅಂತ ವ್ರತ ಇಟ್ಟುಕೊಂಡಿದ್ದರು. ದಿನಾಲೂ ಉಪ್ಪಿಟ್ಟು, ಅವಲಕ್ಕಿ, ರವೆಯಿಂದ ಮಾಡಿದ ಪದಾರ್ಥಗಳನ್ನೇ ತಿನ್ನುತ್ತಿದ್ದರು. ಹೀಗೆ ಒಂದು ವರುಷ ಕಳೆಯಿತು. ಅವರ ತಮ್ಮನ ಮದುವೆ ಕುಲದೇವರ ಸನ್ನಿಧಾನ(ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಶ್ರೀ ಚಂದ್ರಲಾ ಪರಮೇಶ್ವರಿ)ದಲ್ಲಿ ನೆರವೇರಿದಾಗ ವ್ರತವನ್ನು ಬಿಟ್ಟರು. ಆಗ ಊರಿಗೆ ಹೋದಾಗ ತಮ್ಮ ಕುಟುಂಬವನ್ನೂ ಕೂಡ ಹೊಸ ಊರಿಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದರು. ಆ ಊರಿನ ಶಿಕ್ಷಣ ವ್ಯವಸ್ಥೆಯ ಅತ್ಯುತ್ತಮ ಗುಣಮಟ್ಟವೇ ಅವರನ್ನು ಈ ನಿರ್ಧಾರಕ್ಕೆ ತಂದಿತು ಅಂತ ಯಾವಾಗಲೂ ಹೇಳುತ್ತಿದ್ದರು. ಈ ನಿರ್ಧಾರ ಅವರ ಮಕ್ಕಳ ಜೀವನವನ್ನೇ ಬದಲಾಯಿಸಿತು ಅನ್ನೋದರಲ್ಲಿ ಎರಡು ಮಾತಿಲ್ಲ.

ಕುಟುಂಬವನ್ನು ಹೊಸ ಊರಿಗೆ ಕರೆದುಕೊಂಡು ಬಂದಮೇಲೆ, ಅದೇನು ಕಷ್ಟಗಳನ್ನು ಅನುಭವಿಸಬೇಕಾಯಿತು? ಯಾವುದೋ  ಒಂದು ಕೆಟ್ಟ ಅನುಭವ ಅವರಿಗೆ ಜೀವನದಲ್ಲಿ ಮರೆಯಲಾಗದ ಯಾವ ಪಾಠ ಕಲಿಸಿತು?  ಮಕ್ಕಳು, ನಮ್ಮ ಅಮ್ಮ ಹೇಗೆ ಹೊಸ ಊರಿಗೆ ಹೊಂದಿಕೊಂಡರು?  ಕುಟ್ರುಪಾಡಿ ಊರು ಬಿಟ್ಟು ಬಿಡಲು ಮಾಡಿದ ನಿರ್ಧಾರ ಹೇಗೆ ಬದಲಾಯಿತು? ಟ್ಯೂಷನ್ ಯಾಕೆ ಆರಂಭಿಸಿದರು? ಅವರ ಮೊದಲ ಶಿಷ್ಯೆ ಯಾರು? ಟ್ಯೂಷನ್ ಗೆ ಬಂದ ಕೆಲವರು ಮತ್ತೆ ಏಕೆ ಬರಲೇ ಇಲ್ಲ?

ಈ ಪ್ರಶೆಗಳಿಗೆ ಉತ್ತರ ಮುಂದಿನ ಸಂಚಿಕೆಯಲ್ಲಿ.... (ಮುಂದುವರೆಯುವುದು... )...

ನಿಮ್ಮ ಅನಿಸಿಕೆಗಳನ್ನು  ಕಳಿಸಿ ಕೊಡಿ . ನಿಮ್ಮ ಪ್ರೋತ್ಸಾಹ ಸದಾ ನನ್ನ ಮೇಲಿರಲಿ.

- ದಿಲೀಪ್ ದೀಕ್ಷಿತ್

Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ