ಚಲನಚಿತ್ರದ  ಗೀಳು ... ಮನದ  ಗೋಳು - ಭಾಗ ೧

 ಚಲನಚಿತ್ರ ಮಂದಿರಗಳು (ಥಿಯೇಟರ್) ಮನರಂಜನೆಯ ಸ್ಥಳ. ಆ ಮೂರು ಘಂಟೆಯಲ್ಲಿ ಒಂದು ಚಲನಚಿತ್ರ ಜೀವನದ ಏಳು ಬೀಳುಗಳನ್ನು, ಐತಿಹಾಸಕ ಕ್ಷಣಗಳನ್ನು ಮೆಲುಕು ಹಾಕಿ ಆ ಘಟನೆ ನಮ್ಮ ಕಣ್ಣಿಗೆ ಕಟ್ಟುವ ಹಾಗೆ ಮಾಡುತ್ತದೆ. ಎಲ್ಲರ ಜೀವನದಲ್ಲಿ ಕೆಲವು ಘಟನೆಗಳು ಚಲನಚಿತ್ರ ಮತ್ತು ಚಲನಚಿತ್ರ ಮಂದಿರಗಳಿಗೆ ಸಂಬಂಧಿಸಿದ್ದು ಇದ್ದೇ ಇರುತ್ತದೆ. ಹಾಗೆಯೇ ನನ್ನ ಜೀವನದಲ್ಲಿಯೂ ಕೆಲವು ಸ್ವಾರಸ್ಯಕರವಾದ ಘಟನೆಗಳು ಇಂದಿಗೂ ನೆನಪಾಗುತ್ತವೆ. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ ನನ್ನದು. ಇದನ್ನು ಓದಿ ನೀವೂ ಕೂಡ ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರೆ ನನಗೆ ಅಷ್ಟೇ ಸಾಕು.. 

ನನಗೆ ತಿಳಿದಂತೆ ಥಿಯೇಟರಿನಲ್ಲಿ ಮೊದಲು ನೋಡಿದ ಚಿತ್ರ ರವಿಚಂದ್ರನ್ ಅಭಿನಯದ "ರಾಮಾಚಾರಿ", 1991ನೇ ಇಸವಿಯಲ್ಲಿ.  ನಮ್ಮ ಊರಿನಲ್ಲಿ ಚಲನಚಿತ್ರ ಮಂದಿರ ಇರಲಿಲ್ಲ. ಅದು ಇದ್ದದ್ದು ಕಡಬ(ಈಗ ತಾಲೂಕು) ಎನ್ನುವ ನಮ್ಮ ಪಕ್ಕದ ಒಂದು ದೊಡ್ಡ ಊರಿನಲ್ಲ, ಸರಿ ಸುಮಾರು ಮೂರು ಕಿಲೋಮೀಟರು ದೂರದಲ್ಲಿ.  ಅದರ ಹೆಸರು ಜಾನ್ಸನ್ ಥಿಯೇಟರ್.  ಆ ಥಿಯೇಟರ್ ನಲ್ಲಿ ಬರುವ ಪ್ರತಿಯೊಂದು ಚಿತ್ರದ ಒಂದು ಪೋಸ್ಟರ್ ನಮ್ಮ ಊರಿನ ಒಂದು ಅಂಗಡಿಯ ಗೋಡೆಗೆ ಅಂಟಿಸುತ್ತಿದ್ದರು. ಇದು ನಮ್ಮನ್ನು ಆಕರ್ಷಿಸುತ್ತಿತ್ತು.  ಅದನ್ನು ನೋಡಿ  ಚಿತ್ರದ ಬಗ್ಗೆ ಸಂಗತಿಗಳನ್ನು (ಯಾರು ಹೀರೋ, ಹೀರೋಯಿನ್, ವಿಲನ್) ತಿಳಿಯುತ್ತಿದ್ದೆವು. 

ನನ್ನ ಅಣ್ಣನಿಗೆ ಹೇಗಾದರೂ ಮಾಡಿ ರಾಮಾಚಾರಿ ಚಿತ್ರ ನೋಡಲೇಬೇಕು ಅನ್ನೋ ಆಸೆ. ಅದಕ್ಕೆ ಒಂದು ಕಾರಣವೇನು ಎಂದರೆ, ಅವನ ಕೆಲವು ಗೆಳೆಯರು ಹೋಗಿ ಚಿತ್ರ ವೀಕ್ಷಣೆ ಮಾಡಿ ಬಂದಿದ್ದರು. ನಮ್ಮ ಮನೆಯ ನೆರೆಹೊರೆಯವರು ಕೂಡ ನೋಡಿ ಬಂದಿದ್ದರು. ಚಿತ್ರ ಬಂದು ಅದಾಗಲೇ ಎರಡು ವಾರವಾಗಿತ್ತು. ಅಣ್ಣ ಈ ಸಲ ಯಾಕೋ ಏನೋ ಹಠ ಹಿಡಿದು ಕೂತುಬಿಟ್ಟಿದ್ದ. ಎರಡು ದಿನ ಸರಿಯಾಗಿ ಊಟ ಮಾಡಲೇ ಇಲ್ಲ, ಉಪವಾಸ ತರನೇ..

ಆ ಸಮಯದಲ್ಲಿ ನಮ್ಮ ತಂದೆಯವರಿಗೆ ಬರುವ ಸಂಬಳದಲ್ಲಿ ಒಂದು ಚಲನಚಿತ್ರ ತೋರಿಸುವುದೆಂದರೆ ಅವರಿಗೆ ಕಷ್ಟ.ಆದರೆ ಅಣ್ಣನ ಹಠ ನೋಡಿ, ಕೊನೆಗೂ ಕರಗಿಯೇ ಬಿಟ್ಟರು. ಮುಂದಿನ ಆದಿತ್ಯವಾರ ಹೋಗೋಣ ಎಂದು ಹೇಳಿದ ಕೂಡನೆ ಉಪವಾಸ ನಿಂತಿತು. ಆ ದಿನ ಬಂದೆ ಬಿಟ್ಟಿತು. ಅದೇ ಮೊದಲನೇ ಸಲ ನಾವು ಥಿಯೇಟರ್ ಹೇಗಿರುತ್ತದೆ ಎಂದು ನೋಡಿದ್ದು. ಕಡಬಕ್ಕೆ ಹೋಗಿ ಮುಂಜಾನೆಯ ಪ್ರದರ್ಶನ ನೋಡಿದೆವು. ಆ ಚಿತ್ರ ತುಂಬಾನೇ ಚೆನ್ನಾಗಿತ್ತು.  ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿತ್ತು. ಈಗಲೂ ಸಮಯ ಸಿಕ್ಕರೆ ಆ ಚಿತ್ರದ ಎಲ್ಲ ಹಾಡುಗಳನ್ನು ಕೇಳುತ್ತಿರುತ್ತೇನೆ. ಆ ಚಿತ್ರ ಅದೆಷ್ಟು ನಮ್ಮ ಮನದಲ್ಲಿ ಪರಿಣಾಮ ಬೀರಿತ್ತು ಎಂದರೆ ಅದೆಷ್ಟೋ ತಿಂಗಳು ರವಿಚಂದ್ರನ್ ಮಾಡಿದ ಹಾಗೆ ಅನುಕರಣೆ ಮಾಡುತ್ತಿದ್ದೆವು. ಅಂತೂ ಒಂದು ಹಠ ನಮ್ಮ ಕುಟುಂಬವನ್ನು ಥಿಯೇಟರ್ ನೋಡುವಂತೆ ಮಾಡಿತು. 

ನನಗಂತೂ ಕ್ರಿಕೆಟ್ ಬಿಟ್ಟರೆ ಚಲನಚಿತ್ರ ನೋಡುವುದು ಎಂದರೆ ತುಂಬಾ ಇಷ್ಟ. ಏನು ಮಾಡುವುದು ಮನೆಯಲ್ಲಿ ಅಂತೂ ಟಿವಿ ಇರಲಿಲ್ಲ. ನಮ್ಮ ಪಕ್ಕದ ಮನೆಯಲ್ಲಿ ಪ್ರತಿ ಭಾನುವಾರ ಬರುವ ಚಿತ್ರಗಳನ್ನು ತಪ್ಪಿಸುತ್ತಿರಲಿಲ್ಲ. ಹಿಂದಿ, ಕನ್ನಡ ಚಲನಚಿತ್ರಗಳು ಎಂದರೆ ಇಷ್ಟವಾಗುತ್ತಿದ್ದವು. 

 ಹಳ್ಳಿಖೇಡ ಊರಿಗೆ ಬೇಸಿಗೆ ರಜೆಗೆ ಹೋದಾಗ ನಡೆದ ಕೆಲವು ಘಟನೆಗಳು ಇಂದಿಗೂ ಮನದಲ್ಲಿ ಅಚ್ಚಾಗಿ ಉಳಿದಿವೆ. ಸಂಬಂಧಿಕರ ಮನೆಯಲ್ಲಿ ಗೋಂದಳ (ದೇವಿಯ ಒಂದು ಪೂಜೆ) ಇಟ್ಟಿದ್ದರು. ಅದಕ್ಕೆ ಎಲ್ಲರೂ ರಾತ್ರಿ ಇಡೀ ಜಾಗರಣೆ ಇರಬೇಕು. ಅದೇನೋ ಅವರು ಅಂದು ರಾತ್ರಿ ಚಲನ ಚಿತ್ರ ನೋಡಿ, ಜಾಗರಣೆ ಮಾಡೋಣ ಎಂದು ನಿರ್ಧರಿಸಿ, ಬಾಡಿಗೆಗೆ ಟಿವಿ, VCR (ನಮ್ಮ ಜನರೇಶನ್ ದೊಡ್ಡ ದೊಡ್ಡ VCR ನೋಡಿದ್ದೇವೆ, ಈಗ ಅತಿ ಸಣ್ಣ USB ಯನ್ನೂ ನೋಡುತ್ತಿದ್ದೇವೆ. ಅಂದು ರಾತ್ರಿ ನೋಡಿದ ಎರಡು ಚಲನಚಿತ್ರಗಳು ಇಂದಿಗೂ ನೆನಪಿವೆ. ಒಂದು ಕನ್ನಡ, ಮಾಲಾಶ್ರೀ ಅಭಿನಯದ "SP Bhargavi" ಮತ್ತು ಹಿಂದಿ ರಾಜಕುಮಾರ್, ನಾನಾಪಾಟೇಕರ್  ಅಭಿನಯದ "ತಿರಂಗಾ". 

ನಮ್ಮ ಅಜ್ಜನ ಮನೆ ಬೀದರ್. ಅಲ್ಲಿಗೆ ಹೋದಾಗ ನಮ್ಮ ಸೋದರ ಮಾವನಿಗೆ ಹೇಳಿ, VCR ತರಿಸಿಕೊಂಡು  ಊಟ ಎಲ್ಲ ಮುಗಿಸಿ ನೋಡಲು ಆರಂಭಿಸಿ ಸ್ವಲ್ಪ ಹೊತ್ತಾಗಿತ್ತು. ಅದೇನೋ ಅದು ಅಲ್ಲಿಯೇ ನಿಂತು ಬಿಟ್ಟಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ನಂತರ ಅದು ಮುಂದೆ ಹೋಗಲೇ ಇಲ್ಲ.  ಆಗ ರಾತ್ರಿ ಹನ್ನೊಂದು ಗಂಟೆ. ಅಂಗಡಿ ಮುಚ್ಚಿತ್ತು.  ಅಂದು ಆ ಅಂಗಡಿಯವನಿಗೆ ಮನಸ್ಸನಲ್ಲಿಯೇ ಶಪಿಸಿ ಮಲಗಿದ್ದು ಒಂದು ಕೆಟ್ಟ ಅನುಭವ ಇಂದಿಗೂ ನೆನಪಿಗೆ ಬರುತ್ತದೆ. 

ಹಳ್ಳಿಖೇಡದಲ್ಲಿ ಒಂದು ಹೆಸರಿಗೆ ಥಿಯೇಟರ್ ಇತ್ತು(ಮನೆಯಲ್ಲೇ ದೊಡ್ಡ ಪರದೆಯಲ್ಲಿ VCR ತೋರಿಸೋದು). ಅದಕ್ಕೆ ಹೋಂ ಥಿಯೇಟರ್ ಅಂತ ಕರೆಯಬಹುದೇನೋ. ನಮ್ಮ ತಂದೆಯವರು ನಮ್ಮನ್ನು ಕರೆದುಕೊಂಡು ಹೋಗಿಲ್ಲ , ಹಾಗಾಗಿ ಆ ಹೋಂ ಥಿಯೇಟರ್ ನೋಡೋ ಭಾಗ್ಯ ಅಂತೂ ಸಿಗಲಿಲ್ಲ. ಈಗಂತೂ ಯಾವುದೇ ಚಲನಚಿತ್ರ ಮಂದಿರ ಇಲ್ಲ. ನೋಡಬೇಕೆಂದರೆ ಹತ್ತಿರದ ಬೀದರ್ ಗೆ ಹೋಗಬೇಕು. ಆದರೆ ಆ ಹೋಂ ಥಿಯೇಟರ್ ಹೊರಗೆ ಹಾಕುತಿದ್ದ ಪೋಸ್ಟರ್ ನನನ್ನು ತುಂಬಾ ಆಕರ್ಷಿಸುತ್ತಿತ್ತು. ಆ ಪೋಸ್ಟರ್ ನಿಂದ ನಾನು ಹಲವಾರು ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಗೂಗಲ್ ಇರಲಿಲ್ಲ, ಮೊಬೈಲ್ ಅಂತೂ ಇಲ್ಲವೇ ಇಲ್ಲ, ಇಂಟರ್ನೆಟ್ ತುಂಬಾ ದುಬಾರಿ. ಆ ಪೋಸ್ಟರ್ ಇಷ್ಟೊಂದು ವಿಷಯಗಳನ್ನು ತಿಳಿಸಿದಕ್ಕೆ ನಾನು ಅದನ್ನು ಅಂದಿನ  ಗೂಗಲ್ ಅನ್ನಬಹುದಾಗಿತ್ತು. ಆ ಪೋಸ್ಟರ್ ಗಳನ್ನು ನೋಡಿ  ಚಿತ್ರದ ಬಗ್ಗೆ ಕಲಿತ ಸಂಗತಿಗಳು (ಯಾರು ಹೀರೋ, ಹೀರೋಯಿನ್, ವಿಲನ್) ಇಂದಿಗೂ ಕಣ್ಣ ಮುಂದೆ ಬರುತ್ತದೆ.  ಮಿಥುನ್ ಚಕ್ರವರ್ತಿ, ಫಿರೋಜ್ ಖಾನ್, ಸುನಿಲ್ ಶೆಟ್ಟಿ, ಅಕ್ಷಯ್ ಕುಮಾರ್ ಚಿತ್ರಗಳು ತುಂಬಾನೇ ಬರುತ್ತಿದ್ದವು. 

ಕೊನೆಯದಾಗಿ ಪ್ರತಿ ಶುಕ್ರವಾರದ ಉದಯವಾಣಿ ದಿನಪತ್ರಿಕೆ ಕಾಯುತ್ತಿದ್ದದ್ದೇ, ಚಲನಚಿತ್ರಗಳ ವಿವರ ತಿಳಿಯಲು. ಆ ದಿನ ಎರಡು ಪುಟ ಚಲನಚಿತ್ರಗಳಿಗೆ ಮೀಸಲಿರುತಿತ್ತು. ಅವುಗಳನ್ನು ನೋಡುವುದು ಎಂದರೆ ಏನೋ ಒಂದು ಹುಚ್ಚು. ಆ ಎರಡು ಪುಟಗಳು ಎಲ್ಲ ಭಾಷೆಯ ಚಿತ್ರಗಳ ಸಮಗ್ರ ವಿವರ ಮನಸಿಗೆ ನಾಟುವಂತೆ ಇರುತಿ

 

 

 

 

 


Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ