ಉತ್ತರ ಕರ್ನಾಟಕದ ಭಾಷೆಯ ಸೊಗಡು
ಉತ್ತರ ಕರ್ನಾಟಕದ ಭಾಷೆಯ ಸೊಗಡು
ಒಂದು ಊರಿನಿಂದ ಇನ್ನೊಂದು ಊರಿಗೆ ಭಾಷೆ ಬದಲಾಗುತ್ತದೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಸೌಂದರ್ಯ, ಸೊಗಡು ಇದೆ. ಯಾವ ಭಾಷೆಯೂ ಕೀಳು ಹಿರಿದು ಅನ್ನೋ ಹಾಗೆ ಇಲ್ಲ. ಇನ್ನು ಉತ್ತರ ಕರ್ನಾಟಕದ ಭಾಷೆಗೆ ತುಂಬಾ ಜನ ಸೋಲುತ್ತಾರೆ. ಕೆಲವರು ಭಾಷೆ ಎಷ್ಟೊಂದು ಒರಟು ಎನ್ನುತ್ತಾರೆ. ಭಾಷೆ ಒರಟದಾರೂ ಭಾವನೆ ಸವಿಯಾಗಿರುತ್ತದೆ.
ಈ ಭಾಷೆಯ ಬಗ್ಗೆ ನನ್ನ ಕೆಲವು ಅನಿಸಿಕೆಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ನನ್ನ ಊರು ಬೀದರ್ ಹತ್ತಿರದ ಹಳ್ಳಿಖೇಡ(ಬಿ). ವಿದ್ಯಾಭ್ಯಾಸದ ಸಲುವಾಗಿ ದಕ್ಷಿಣ ಕನ್ನಡಕ್ಕೆ ಹೋದರೂ ನಮ್ಮ ಭಾಷೆ ಮರೆತಿಲ್ಲ. ದಕ್ಷಿಣ ಕನ್ನಡದ ಭಾಷೆ ಅಚ್ಚ ಪುಸ್ತಕೀಯ ಭಾಷೆ. ಅದರಲ್ಲಿ ಕೆಟ್ಟ ಶಬ್ದಕ್ಕೆ ತುಂಬಾ ಜಾಗವೇ ಇಲ್ಲ ಮತ್ತು ಜನ ಉಪಯೋಗಿಸೋದು ಇಲ್ಲ. ನಾವು ಆ ಭಾಷೆಯನ್ನೂ ಕಲಿತೆವು. ಇಂದಿಗೂ ಆ ಭಾಷೆ ತಾನಾಗಿಯೇ ಸರಾಗವಾಗಿ ಹರಿದು ಬರುತ್ತದೆ. ಬೀದರ್ ಗುಲ್ಬರ್ಗ ಹುಬ್ಬಳ್ಳಿ ಉತ್ತರ ಕರ್ನಾಟಕ ಆದರೂ, ಇಲ್ಲಿಯೂ ಭಾಷೆಯಲ್ಲಿ ಅಂತರ ಇದೆ.
"ಸರಿ ಹೋಗಿದ್ದಾರೆ" ಅಂದರೆ "ಮರಣ ಹೊಂದಿದ್ದಾರೆ" ಅಂತ ಅರ್ಥ. ಇದನ್ನು ದಕ್ಷಿಣ ಕನ್ನಡದ ಭಾಷೆಯಲ್ಲಿ ಹೇಳಿದರೆ ಕರೆಕ್ಟ್ ಆಗಿ ಹೋಗಿದ್ದಾರೆ ಅಂತ ಅರ್ಥ ಬರುತ್ತೆ. "ಎಕಡ್ ಹೋಯಿತೀ" ಅಂದರೆ ಎಲ್ಲಿಗೆ ಹೋಗುತ್ತಿ ಅಂತ. ಹೆಚ್ಚಿನ ವಾಕ್ಯದ ಕೊನೆಗೆ "ಅವ್ನ ಅವ್ವನ್/ ನಿಮ್ಮ ಅವ್ವನ್" ಅಂತ ಹೇಳೋದು ಸರ್ವೇ ಸಾಮಾನ್ಯ. ಇದರ ಅರ್ಥ ಕೆಟ್ಟದಾದರೂ ಇದು ಇನ್ನೊಬ್ಬನ ಬಗ್ಗೆ ಇರುವ ಪ್ರೇಮ ಅಥವಾ ಕೋಪ ತೋರಿಸುತ್ತದೆ.
ಕೆಲವೊಂದು ಮಾತುಗಳು ಉರ್ದು/ಹಿಂದಿ ಭಾಷೆಯ ಹೇರಿಕೆಯಿಂದಾಗಿ ಇಂದಿಗೂ ಚಾಲ್ತಿಯಲ್ಲಿ ಇದೆ. ಅಂಗಡಿಗೆ ಇಂದಿಗೂ "ದುಕಾನ್" ಅಂತಾರೆ. ೫೦ ಗ್ರಾಮ್ಸ್ ಗೆ "ಚಟಾಕ್", ೧೦೦ಗ್ರಾಮ್ಸ್ ಗೆ " ಸೌ ಗ್ರಾಂ " ಅಥವಾ ೨ "ಚಟಾಕ್"
ಅಂತಾರೆ. ೨೫೦ ಗ್ರಾಮ್ಸ್ "ಪಾವ್ ಕಿಲೋ" , "ಆಧಾ ಕಿಲೋ" ೫೦೦ ಗ್ರಾಮ್ಸ್ ಗೆ ಹೇಳ್ತಾರೆ.
ಹತ್ತು ವರುಷದ ಹಳೆಯ ಸಂಗತಿ. ನನ್ನ ಹೆಂಡತಿಗೆ ನಮ್ಮ ಬೀದರ್ ಭಾಷೆ ಹೊಸತು. ಅವಳ ತವರೂರು ಬಾಗಲಕೋಟೆ ಜಿಲ್ಲೆಯ ಜಮಖಂಡಿ. ನಮ್ಮಲ್ಲಿ "ಎಲೆಕ್ಟ್ರಿಕ್ ಬಟನ್" ಗೆ ಖಟಕಾ ಅಂತಾರೆ. ಖಟಕಾ ಹಾಕು ಅಂದಾಗ ನನ್ನ ಹೆಂಡತಿಗೆ ತಿಳಿಯದೆ ಏನ್ರಿ ಅದು ಖಟಕಾ ಅಂದ್ರೆ ಅಂತ ಕೇಳಿದಾಗ, ನಾ ಹೇಳಿದೆ ಬಟನ್ ಅಂತ. ಈಗಲೂ ಒಮ್ಮೊಮ್ಮೆ ಆ ಸಂಗತಿ ಮೆಲುಕು ಹಾಕಿ ನಗುತ್ತೇವೆ.. ಅವಳು ಎಂಥಾ ಭಾಷೆ ನಿಮ್ಮದು ಅಂದಾಗ ನಾನು ಕೂಡ ಅವರ ಭಾಷೆಯ ವಿಚಿತ್ರತೆ ಹೇಳಿ ಕಾಲು ಎಳೆಯುತ್ತೇನೆ.
ಬೀದರ್ ಜಿಲ್ಲೆಯಲ್ಲೇ "ಇಲಿ" ಅಂದರೆ ತಿಳಿಯಲ್ಲ.. "ಇಲ್ಚ ಪತ್ತು " ಅಂದ್ರೆ ತಿಳಿಯೋದು. ನನಗೂ ಅದೇಕೆ ಇಲಿ ಅನ್ನೋ ಸಣ್ಣ ಶಬ್ದ ಬಿಟ್ಟು ಅಂತ ದೊಡ್ಡ ಶಬ್ದ ಬಳಸಾಯುತ್ತಾರೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.ಬೋನ ಬ್ಯಾಳಿ ಎಂದರೆ ಏನಪ್ಪಾ ಅಂತಾರೆ. ಬೋನ ಅಂದರೆ ಅನ್ನ ಬ್ಯಾಳಿ ಎಂದರೆ ಬೇಳೆಯ ಸಾರು.
ಭಾಲ್ಕಿ ಭಾಷೆ ಇನ್ನೂ ಒರಟು. ನಾವು ಇಂಜಿನಿಯರಿಂಗ್ ಕಲಿಯುವಾಗ ಒಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಆ ಮನೆಯಲ್ಲಿ ಯಜಮಾನಿಯೇ ನಿಜವಾದ ಯಜಮಾನ. ನಾವೆಲ್ಲಾ ಅಕ್ಕವರು ಅಂತ ಕರೆಯುತ್ತಿದೆವು. ಅಕ್ಕವರಿಗೆ ಸಿಟ್ಟು ಬಂದಾಗ "ನಿನ್ನ ಹೆಣ ಎತ್ತಲಿ", "ನಿನ್ನ ಬಾಣಲಿದಾಗ ಹಾಕಿ ಹುರಿಲಿ" ಅಂತ ಬಯ್ಯುತ್ತಿದ್ದರು. ನಮ್ಮ ರೂಮಿನ ಸಹಪಾಠಿ ದಕ್ಷಿಣ ಕನ್ನಡದವನು. ಅವನಿಗೆ ಮೊದಲಿಗೆ ಇದೇನಪ್ಪ ಈ ತರ ಎಲ್ಲ ಕೆಟ್ಟ ಭಾಷೆ ಪ್ರಯೋಗಿಸುತ್ತಾರೆ ಅಂತ ಅನಿಸುತಿತ್ತು. ಒಂದೆರಡು ವರುಷದ ನಂತರ ಅವನಿಗೆ ಇದೆಲ್ಲ ಒಂದು ಸಾಮಾನ್ಯ ಅಂತ ಅನಿಸಲು ಆರಂಭಿಸಿತು. ನಮಗೆ ಈ ಭಾಷೆ ಕೆಟ್ಟದು ಅಂತ ಅನಿಸೋದೇ ಇಲ್ಲ. ಈ ವಿಶೇಷಣಗಳು ಇಲ್ಲದೆ ಹೋದರೆ ಈ ಭಾಷೆಗೆ ಯಾವುದೇ ತನ್ನದೇ ಆದ ಸೌಂದರ್ಯ ಇಲ್ಲ.
ನಮ್ಮ ಕಾಲೇಜು ಸಹಪಾಠಿಗಳು ಹುಬ್ಬಳ್ಳಿ, ಹುಲಕೋಟಿ ಕಡೆಯವರು. ಅವರಂತೂ "ಸೂ...ಮಕ್ಕಳು" ಅನ್ನೋದೇ ಯಾವ ವಾಕ್ಯ ಪೂರ್ಣವಾಗೋದೇ ಇಲ್ಲ. ಅದು ಅವರಿಗೆ ವಿಶೇಷಣ. ಅಪ್ಪ ಮಗನ ಜೊತೆಯಾಗಲಿ, ಅಮ್ಮ ಮಗನ ಬಗ್ಗೆ ಆಗಲಿ ಆ ವಿಶೇಷಣ ಇದ್ದೆ ಇರುತ್ತದೆ. ಹಾಗಂತ ಯಾರೂ ಇದನ್ನು ಕೆಟ್ಟದು ಅಂದು ಕೊಳ್ಳೋದೇ ಇಲ್ಲ.
"ದೀಪಾವಳಿಗೆ ಪಟಾಕ್ಷಿ ಹೊಡೀತಾರೆ" ಅಂತ ನನ್ನ ಹೆಂಡತಿ ಹೇಳಿದಳು. ನಾ ಅಂದೇ "ಪಟಾಕ್ಷಿ" ಅಂದ್ರೆ ಏನು.. ಅಲ್ಲಿ ಪಟಾಕಿಗೆ ಪಟಾಕ್ಷಿ ಅನ್ನುತ್ತಾರೆ ಅಂದಳು. ನಾ ಇದು ಪರೀಕ್ಷಿಸೋಣ ಅಂತ ಮಾವನ ಮನೆಗೆ ಹೋದಾಗ ನನ್ನ ಹೆಂಡತಿಯ ಬಳಗದವರ ಕೇಳಿದೆ. ಅವರ ಉತ್ತರವೂ "ಪಟಾಕ್ಷಿ" ಅಂತಾನೆ ಇತ್ತು. ನಾ ಕೇಳಿದೆ ಅದೇಕೆ ಹಾಗೆ ಎಂದರೆ, ನಮ್ಮ ಕಡೆ ಹೇಳೋದೇ ಹೀಗೆ ಅಂದರು. ನನಗೆ ಇದಕ್ಕೂ ಉತ್ತರ ಸಿಕ್ಕಿಲ್ಲ ಯಾಕೆ ಪಟಾಕ್ಷಿ ಅಂತಾರೆ ಅಂತ. ಅಂತೂ ಯಾರಾದರೂ ಹುಬ್ಬಳ್ಳಿ ಕಡೆಯವರು ನಮ್ಮ ಭಾಷೆಯ ಬಗ್ಗೆ ಏನಾದರೂ ಅಂದರೆ ಕಾಲು ಎಳೆಯಲು ಒಂದು ವಸ್ತು ಸಿಕ್ಕಿತು ಅಂತ ಖುಷಿಯಾದೆ.
ಈಗ ಮಳೆಗಾಲ. ಬೀದರ್ ಕಡೆ "ಮಳಿ ಹೊಂಟದ " ಅಂದರೆ ಮಳೆ ಬರುತ್ತಿದೆ ಅಂತ. ದಕ್ಷಿಣ ಕನ್ನಡದ ಕಡೆ ಮಳೆ ಹೊಯ್ಯುತ್ತಿದೆ ಅಂತಾರೆ. ಯಾರಾದರೂ ಎಲ್ಲಿಗೆ ಮಳೆ ಹೊರಟಿದೆ ಅಂದರೆ ನಾವೂ ಕೂಡ ಮಳೆ ಹೊಯ್ಯಲು ಅದೇನು ದೋಸೆನಾ ಅಂತ ಕೇಳ್ತಾ ಇದ್ದೆವು.
ಒಂದಂತೂ ಸತ್ಯ. ಭಾಷೆ ಎಷ್ಟೇ ಒರಟು ಎನಿಸಿದರೂ ಅದರಲ್ಲಿ ಮುಕ್ತವಾದ ಭಾವನೆಗಳಿವೆ. ಮುಂದೆ ಒಂದು , ಹಿಂದೆ ಇನ್ನೊಂದು ಅನ್ನೋದಕ್ಕೆ ಆಸ್ಪದವೇ ಇಲ್ಲ. ಮನಸಿನ್ನಲ್ಲಿ ಇರೋದನ್ನು ಹಾಗೆಯೇ ವ್ಯಕ್ತಪಡಿಸುತ್ತದೆ.
ಇನ್ನೂ ಬರೆಯೋದು ಇದೆ.. ಸದ್ಯಕ್ಕೆ ಈ ವಿಷಯಕ್ಕೆ ಇಲ್ಲಿಯೇ ವಿರಾಮ ಕೊಡುತ್ತೇನೆ. ಮುಂದಿನ ಸಂಚಿಕೆಯಲ್ಲಿ ಹಳ್ಳಿಯ ಜೀವನದ ಬಗ್ಗೆ ಬರೆಯುತ್ತೇನೆ.
ನಿಮ್ಮ ಅಭಿಪ್ರಾಯ ತಿಳಿಸಿರಿ.
ದಿಲೀಪ್ ದೀಕ್ಷಿತ್
Comments
Post a Comment