ಮೋಜಿನ ಕಡೆಗೆ- ಮನುಜನ ನಡಿಗೆ

   ಮೋಜಿನ ಕಡೆಗೆ- ಮನುಜನ ನಡಿಗೆ 
ಆರೋಗ್ಯವೇ ಭಾಗ್ಯ. ಈ ಕಾಲದಲ್ಲಿ ನಗರದಲ್ಲಿ ಬೆಳಿಗ್ಗೆ  ಮತ್ತು ಸಂಜೆ ಎಲ್ಲ ವರ್ಗದವರು(ಹಿರಿಯರು, ಕಿರಿಯರು) ಉದ್ಯಾನವನಕ್ಕೆ ಮುಂಜಾನೆ ಮತ್ತು ಸಂಜೆಯ ನಡಿಗೆಯ ಸಲುವಾಗಿ ಹೋಗುವುದು ಸರ್ವೇ ಸಾಮಾನ್ಯ. ಆ ನಡಿಗೆಯು ಮನಸ್ಸಿಗೆ ಹಿತ ನೀಡುವುದರ ಜೊತೆಗೆ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ.

ಉದ್ಯಾನವನದಲ್ಲಿ ನಡಿಗೆಯ ಸಮಯದಲ್ಲಿ ಕೆಲವು ರೋಚಕ ಸಂಗತಿಯನ್ನು ಹಂಚಿಕೊಳ್ಳುವ ಬಯಕೆ ನನ್ನದು.

ನಡಿಗೆಯನ್ನು ಕೆಲವರು  ಒಬ್ಬಂಟಿಯಾಗಿ ಮಾಡಲು ಇಷ್ಟ ಪಟ್ಟರೆ, ಇನ್ನು ಕೆಲವರು ಸಣ್ಣ ಗುಂಪುಗಳಲ್ಲಿ, ಮತ್ತೆ ಕೆಲವರು ದೊಡ್ಡ ಗುಂಪುಗಳಲ್ಲಿ ಮಾಡಲು ಇಷ್ಟ ಪಡುತ್ತಾರೆ. ನಡಿಗೆಯ ಜೊತೆಗೆ ಜನರು ತಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಲು ಉಪಯೋಗಿಸುತ್ತಾರೆ. ಕೆಲವು ಗುಂಪುಗಳು ನಿನ್ನೆಯ ವಿಶೇಷ ಸುದ್ದಿಗಳನ್ನು, ಇಂದಿನ ರಾಜಕೀಯ ಸಮಾಚಾರಗಳನ್ನು ಚರ್ಚಿಸುತ್ತಾರೆ. ಅಪರಿಚಿತ ಮಿತ್ರರು ದಿನ ಕಳೆದಂತೆ ಆತ್ಮೀಯರಾಗುತ್ತಾರೆ. ಈ ಸಮಯ ಮನುಷ್ಯನಿಗೆ ಮತ್ತಷ್ಟು ಸಂಘ ಜೀವಿಯಂತೆ ಬದುಕಲು ಕಲಿಸುತ್ತದೆ.

ಯುವ ಜನರು ಶಾಲೆಯಲ್ಲಿನ ವಿಷಯಗಳನ್ನು, ಪ್ರೇಮ ಸಂಗತಿಗಳನ್ನು, ಸಹ ಜೊತೆಗಾರರನ್ನು ಕಿಚಾಯಿಸುತ್ತ ಮಗ್ನರಾಗಿ ಹೋಗುವ ದೃಶ್ಯ ಸರ್ವೇ ಸಾಮಾನ್ಯ. ಇನ್ನು ಕೆಲವು ಪ್ರೇಮಿಗಳು ಪ್ರೇಮ ಸಲ್ಲಾಪದಲ್ಲಿ ಈ ಲೋಕವನ್ನೇ ಮರೆತು ಹೋಗಿರುವವರಂತೆ ಮಗ್ನರಾಗಿ ಇರುತ್ತಾರೆ. ಅವರಿಗೆ ನಡಿಗೆಗಿಂತ ತಮ್ಮ ಲೋಕದಲ್ಲೇ ಮುಳುಗಿ ಹೋಗುವ ಆತುರದಲ್ಲಿ  ಇರುತ್ತಾರೆ.

ಇನ್ನು ಮಹಿಳಾ ಗುಂಪುಗಳ ಚರ್ಚಾ ವಿಷಯವೇ ಬೇರೆ.  ತಮ್ಮ ಪಾಕ ಶಾಸ್ತ್ರದ ವಿವರಗಳು, ನಿನ್ನೆಯ ಕಾರ್ಯಕ್ರಮದ ಊಟದ ಮತ್ತು ಅಲ್ಲಿನ ವ್ಯವಸ್ಥೆ, ಅವ್ಯವಸ್ಥೆಗಳು, ಸೌಂದರ್ಯ ಕಾಪಾಡುವ ಸಲಹೆಗಳ ಸುತ್ತ ಇರುತ್ತವೆ. ಅವರ ನಡಿಗೆಯು ಆಮೆಯ ನಡಿಗೆಯ ಹಾಗೆ ತುಂಬಾ ನಿಧಾನ ಆದರೂ  ಅವರ ಮಾತುಗಳು ಮಾತ್ರ ಮಿಂಚಿನ ಹಾಗೆ. 

 ಸದ್ಯದಲ್ಲೇ ಮದುವೆಯಾಗುವ ಜೋಡಿಗಳು ವಿವಿಧ ಛಾಯಾ ಚಿತ್ರ ತೆಗೆದುಕೊಳ್ಳುವ ದೃಶ್ಯ ಸಹಜ. ಹೊಸದಾಗಿ ಮದುವೆಯಾದ ಜೋಡಿಗಳು ಸರಸ ಸಲ್ಲಾಪದ ಮಾತುಗಳ ಜೊತೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ನಡಿಗೆಯ ಜೊತೆಗೆ ಕಿವಿಯುಲಿ (earphone) ಹಾಕಿಕೊಂಡು , ಕೆಲವರು ಎಲ್ಲರಿಗೂ  ಕೇಳಿಸುವಂತೆ ವಿವಿಧ ತರಹದ ಸಂಗೀತ ಆಸ್ವಾದಿಸುತ್ತ ಸಾಗುತ್ತಿರುತ್ತಾರೆ

ಕೆಲವರು ನಡಿಗೆಯ ಜೊತೆಗೆ ವ್ಯಾಯಾಮ, ಯೋಗ, ಓಟ , ದೈಹಿಕ ಕಸರತ್ತು ಮಾಡುವುದನ್ನು ಕಾಣಬಹುದು, ಇನ್ನು ಕೆಲವರು ದಿನ ಪತ್ರಿಕೆ, ಕಾದಂಬರಿ, ಪರೀಕ್ಷಾ ಸಮಯದಲ್ಲಿ ಪಠ್ಯ ಪುಸ್ತಕ ಓದುವುದರಲ್ಲಿ ನಿರತರಾಗಿತ್ತಾರೆ. 

ಪುಟಾಣಿ ಮಕ್ಕಳು ಹೆತ್ತವರೊಡನೆ ಅಥವಾ ಅಜ್ಜ ಅಜ್ಜಿಯರ ಜೊತೆಗೆ ಆಟವಾಡುವುದನ್ನು ನೋಡುವ ದೃಶ್ಯ ಎರಡೂ ಕಂಗಳಿಗೆ ಆಪ್ಯಾಯಮಾನ ಎನಿಸುತ್ತದೆ. ನಾವು ಅದನ್ನು ನೋಡಿ ನಮ್ಮ ಬಾಲ್ಯದ  ನೆನಪುಗಳನ್ನು ಮೆಲುಕು ಹಾಕದೆ ಇರಲು ಸಾಧ್ಯವಿಲ್ಲ.

ಉದ್ಯಾನವನದ ಸುತ್ತ ಸಾಕಷ್ಟು ತರಹದ ವಸ್ತುಗಳು ಸಿಗುತ್ತವೆ.  ಬಿಸಿಬಿಸಿ ಸೂಪ್, ವಿವಿಧ ಮೂಲಿಕೆಗಳ ರಸಗಳು, ಆರೋಗ್ಯಕ್ಕೆ ಹಿತವಾದ ಮೊಳಕೆ ಕಾಳುಗಳು,  ತಾಜಾ ತರಕಾರಿಗಳು , ಸ್ವೀಟ್ ಕಾರ್ನ್ , ವಿವಿಧ ತರಹದ ಗರಿ ಗರಿ ದೋಸೆಗಳು,  ರುಚಿ ರುಚಿ ಚಾಟ್ಸ್ ಗಳು , ರೈತರಿಂದ ನೇರವಾಗಿ ಗ್ರಾಹಕರ ಸಲುವಾಗಿ ಮಾರಾಟಕ್ಕೆ ತಂದ ವಿವಿಧ ಹಣ್ಣುಗಳು ಇರುತ್ತವೆ.  ಜನರು ರಕ್ತದೊತ್ತಡ , ಮಧುಮೇಹ ಪರೀಕ್ಷಿಕರ ಹತ್ತಿರ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುತ್ತಾರೆ. ಉಚಿತ ತಪಾಸಣೆ ಇದ್ದರೆ ಜನರ ಗುಂಪು ಜಾಸ್ತಿ ಇರುವುದನ್ನೂ ಗಮನಿಸಬಹುದು. ಕೆಲವು ಕಂಪನಿಯವರು ಹೊಸ ವಸ್ತುಗಳನ್ನು ಪರಿಚಯಿಸಿ ಅದರ ಮಹತ್ವ ಹೇಳಿ ಗ್ರಾಹಕರನ್ನು ಸೆಳೆಯುವ ದೃಶ್ಯ ಕಾಣಸಿಗುತ್ತದೆ.

ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸಮಯವನ್ನು ಚೆನ್ನಾಗಿ ಉಪಯೋಗಿಸುವುದನ್ನು ನೋಡಿದಾಗ ಮಾನವ ನಿಜವಾಗಿಯೂ ಸಂಘ ಜೀವಿಯಾಗಿ ಇರದೆ ಇರಲು ಸಾಧ್ಯವೇ ಇಲ್ಲ ಎನಿಸುತ್ತದೆ. ಸ್ವಲ್ಪ ಸಮಯ ಸಿಕ್ಕಾಗ ನಿಮ್ಮ ಮನೆಯ ಹತ್ತಿರದ ಉದ್ಯಾನವನದ ಸುತ್ತು ಹೊಡೆಯಲು ಮರೆಯಬೇಡಿ.






Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ