ಇತ್ತೀಚಿನ ಒಂದು ಸಂಭಾಷಣೆಯಲ್ಲಿ ಮಹಾಭಾರತದ ಕರ್ಣ ದುರಂತ ನಾಯಕನೋ ಅಥವಾ ಒಳ್ಳೆಯ ವ್ಯಕ್ತಿಯೋ ಅನ್ನೋದರ ಬಗ್ಗೆ ನನ್ನ ಅನಿಸಿಕೆ ಹಂಚಿ ಕೊಂಡಿದ್ದೇನೆ. ಅದರ ಸಾರಾಂಶ ಹೀಗಿದೆ.
ನಾನು ಓದಿದ ಕೆಲವು ಮಹಾಭಾರತ ಗ್ರಂಥಗಳ ಆಧಾರದ ಮೇಲೆ, ನನ್ನ ಅನಿಸಿಕೆ ಹಂಚಿ ಕೊಂಡಿದ್ದೇನೆ. ನನ್ನ ಗ್ರಹಿಕೆ ತಪ್ಪಿರಬಹುದು, ಹಾಗೇನಾದರೂ ಇದ್ದರೆ ನಾನು ನನ್ನ ಗ್ರಹಿಕೆಯನ್ನು ಸರಿಪಡಿಸಿಕೊಳ್ಳುತ್ತೇನೆ.
ಪ್ರಶ್ನೆ 1. ದಾನವೀರ ಎಂದು ಕರೆಯುತ್ತಾರೆ, ಬೇರೆಯವರ ದಾನಧರ್ಮ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ಕಂಡಿಲ್ಲ.... ಬೇರೆಯವರು ದಾನ ಮಾಡುತ್ತಿರಲಿಲ್ಲ ಅಂತ ಎಲ್ಲೂ ಹೇಳಿಲ್ಲ.. ಇಂದ್ರನಿಗೆ ಕರ್ಣಕುಂಡಲ ದಾನ ಮಾಡಿದ್ದು, ಕುಂತಿಗೆ ಅರ್ಜುನನನ್ನು ಬಿಟ್ಟು ಬೇರೆ
ಪಾಂಡವರ ಹತ್ಯೆ ಮಾಡುವುದಿಲ್ಲ ಅಂತ ವಾಗ್ದಾನ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ವಿಶೇಷ ಪ್ರಕರಣ ನನಗೆ ತಿಳಿದಿಲ್ಲ.
ನನ್ನ ಉತ್ತರ: ನಿಮ್ಮ ಪ್ರಶ್ನೆ ಸರಿಯಾಗಿದೆ. ಮಹಾಭಾರತದಲ್ಲಿ ಇನ್ನೂ ಬಹಳಷ್ಟು ನಿದರ್ಶನಗಳು ಬರುತ್ತವೆ, ಕರ್ಣ ಯಾಕೆ ದಾನವೀರ ಎಂದು. ಕೃಷ್ಣನೇ ಬಹಳಷ್ಟು ಕಥೆಗಳನ್ನು ಹೇಳುತ್ತಾನೆ. ಒಂದು ಕಥೆ ಹೀಗಿದೆ. ಒಂದು ಸಲ, ಕೃಷ್ಣ ಬ್ರಾಹ್ಮಣನ ವೇಷ ಧರಿಸಿ ಧರ್ಮರಾಜನ ಬಳಿಗೆ ಬಂದು, ಒಣ ಕಟ್ಟಿಗೆ ಬೇಕು ಎಂದಾಗ, ಈಗ ಮಳೆಗಾಲ ಒಣ ಕಟ್ಟಿಗೆ ಸಿಗಲು ಸಾಧ್ಯವಿಲ್ಲ ಎಂದನಂತೆ. ಕೃಷ್ಣ ಕರ್ಣನ ಬಳಿಗೆ ಹೋಗಿ ಕೇಳಿದಾಗ, ಹಿಂದೆ ಮುಂದೆ ನೋಡದೆ , ತನ್ನ ಮನೆಯ ಬಾಗಿಲನ್ನೇ ಒಡೆದು ಒಣ ಕಟ್ಟಿಗೆ ಕೊಟ್ಟನಂತೆ. ಕರ್ಣ ಸಾಯುವ ಸಮಯವದು, ಕೃಷ್ಣ ಮತ್ತೆ ಬ್ರಾಹ್ಮಣ ವೇಷಧಾರಿಯಾಗಿ ಏನಾದರು ಕೊಡು ಎಂದಾಗ, ತನ್ನ ಚಿನ್ನದ ಹಲ್ಲನ್ನು ಮುರಿದು ಕೊಟ್ಟನಂತೆ.
ಅರ್ಜುನ ಯಾವಾಗಲೂ ಕೃಷ್ಣ "ಕರ್ಣನನ್ನು ದಾನವೀರ" ಎಂದು ಕರೆಯುವುದನ್ನು ಕಂಡು ಸಿಟ್ಟು ಮಾಡಿಕೊಂಡು ನೀನು ಯಾಕೆ ಅವನಿಗೆ ದಾನವೀರ ಎನ್ನುತ್ತಿ , ನನಗೆ ಏಕೆ ಅಲ್ಲ ಎಂದಾಗ, ಒಂದು ಪರೀಕ್ಷೆ ಮಾಡಿದ. ಕೃಷ್ಣ ಎರಡು ಬೆಟ್ಟವನ್ನು ಚಿನ್ನವನ್ನಾಗಿ ಮಾಡಿದ. ಕರ್ಣ ಮತ್ತು ಅರ್ಜುನನನ್ನು ಕರೆದು, ಈ ಬೆಟ್ಟದಲ್ಲಿ ಇರುವ ಚಿನ್ನವನ್ನು ಅಲ್ಲೇ ಹತ್ತಿರದ ಊರಿನವರಿಗೆ ಹಂಚಿ ಎಂದ. ಅರ್ಜುನ, ತಾನೇ ಬೆಟ್ಟವನ್ನು ಅಗೆದು ಅದರಿಂದ ಬಂದ ಚಿನ್ನವನ್ನು ಊರವರಿಗೆ ಹಂಚಲು ಆರಂಭಿಸಿದನು. ಎಷ್ಟು ಅಗೆದರೂ ಮತ್ತು ಹಂಚಿದರೂ ಬೆಟ್ಟ ಕರಗಲಿಲ್ಲ. ಆದರೆ ಕರ್ಣ ಇಬ್ಬರು ಹಳ್ಳಿಗರನ್ನು ಕರೆದು , ಈ ಬೆಟ್ಟದಲ್ಲಿ ಸಿಗುವ ವಸ್ತುವನ್ನು ಊರವರಿಗೆ ಹಂಚಿ ಎಂದು ಹೇಳಿ ಹೋದನಂತೆ. ಅವನಿಗೆ ಯಾವುದೇ ವಸ್ತುವಿನ ಮೋಹವಿರಲಿಲ್ಲ. ಅವನಿಗೆ ಕೊಡುವುದು ಬಿಟ್ಟು ವಸ್ತುವಿನ ಬಗ್ಗೆ ಯಾವುದೇ ಮೋಹವಿರಲಿಲ್ಲ.
ಇನ್ನೂ ಹಲವಾರು ಕಥೆಗಳು ಉಪಕಥೆಗಳಲ್ಲಿ ಬರುತ್ತವೆ.
ಪ್ರಶ್ನೆ 2. ಅರ್ಜುನನಿಗಿಂತ ಶೂರ, ಪರಾಕ್ರಮಿ ಅಂತ ಹೇಳುತ್ತಾರೆ... ಅಜ್ಞಾತವಾಸದ ಅಂತ್ಯದಲ್ಲಿ ಗೋಗ್ರಹಣದ ಸಂದರ್ಭದಲ್ಲಿ ಆದ ಯುದ್ಧದಲ್ಲಿ ಕರ್ಣ ಅರ್ಜುನನಿಂದ ಸೋಲುತ್ತಾನೆ, ಅಲ್ಲದೆ ಪಾಂಡವರ ವನವಾಸದ ಸಮಯದಲ್ಲಿ ದುರ್ಯೋಧನ ಗಂಧರ್ವರ ಬಂಧಿಯಾದಾಗ ಬಿಡಿಸಲು ಕರ್ಣನಿರಲಿಲ್ಲವೆ?
ನನ್ನ ಉತ್ತರ: ಅಂದು ಕರ್ಣ ಮತ್ತು ದುರ್ಯೋಧನ ಇಬ್ಬರೂ ಮದ್ಯದ ನಶೆಯಲ್ಲಿ ಇದ್ದರು. ಆ ಸಮಯದಲ್ಲಿ ಎಲ್ಲರೂ ದುರ್ಯೋಧನನ ಶಿಬಿರದಲ್ಲಿ ಇದ್ದರು. ಕರ್ಣ ತನ್ನ ಶಸ್ತ್ರ ಮರೆತು ಬಂದಿದಕ್ಕೆ , ಮತ್ತೆ ತರಲು ತನ್ನ ಶಿಬಿರಕ್ಕೆ ಹೋದನು. ವಾಪಸು ಬರುವಷ್ಟರಲ್ಲಿ, ಭೀಮ ಮತ್ತು ಅರ್ಜುನರು ದುರ್ಯೋಧನನ್ನು ಬದುಕಿಸಿದ್ದರು.
ಪ್ರಶ್ನೆ 3. ಅವನು ಅಷ್ಟೇ ಒಳ್ಳೆಯವನು ಅಂತಾದರೆ ದುಷ್ಟಚತುಶ್ಟಯ ರಲ್ಲಿ ಕರ್ಣನನ್ನು ಯಾಕೆ ಸೇರಿಸುತ್ತಾರೆ?
ನನ್ನ ಉತ್ತರ: ಕರ್ಣ ಒಳ್ಳೆಯವನೇ. ಆದರೆ ಅವನ ಸಹವಾಸವೇ ಅವನನ್ನು ಕೆಟ್ಟ ಗುಣಗಳ ಕಡೆಗೆ ಆಕರ್ಷಣೆ ಮಾಡುತ್ತದೆ. ವೇದಗಳಲ್ಲಿ , ನಮ್ಮ ಸುತ್ತ ಜನರ ಸಹವಾಸ ನಮ್ಮ ಗುಣವನ್ನು ನಿರ್ಧರಿಸುತ್ತವೆ. ಕರ್ಣನ ಸಹವಾಸ ಸದಾ ಕೆಟ್ಟದ್ದನ್ನೇ ಬಯಸುವ , ದುರ್ಯೋಧನ, ಶಕುನಿ ಮತ್ತು ದುಶ್ಯಾಸನರ ಜೊತೆ ಇದ್ದದಕ್ಕೆ , ಅವನ ದುಷ್ಟ ಗುಣಗಳು ಅವನ ಒಳ್ಳೆಯ ಗುಣಗಳನ್ನು ಮರೆಮಾಚಿಸಿದವು. ನೀವು ಎಷ್ಟೇ ಒಳ್ಳೆಯವರಾದರೂ, ನಿಮ್ಮ ಸುತ್ತಲಿನ ವಾತಾವರಣ ಸರಿ ಇಲ್ಲ ಅಂದರೆ ನಿಮ್ಮ ಮನಸ್ಸು ಹಿತವಾಗಿ ಇರಲು ಸಾಧ್ಯವಿಲ್ಲ. ಎಲ್ಲ ಕೆಟ್ಟ ಕೆಲಸಗಳಲ್ಲಿ , ಕರ್ಣನೂ ಸಹಭಾಗಿಯಾಗಿದ್ದ.
ಪ್ರಶ್ನೆ 4. ದ್ರೌಪದಿಯ ವಸ್ತ್ರಾಪಹರಣ ವನ್ನು ವಿರೋಧಿಸದೆ, ಅನುಮೋದಿಸಿದ್ದು/ಪ್ರೋತ್ಸಾಹಿಸಿದ್ದು ತಪ್ಪಲ್ಲವೇ?
ನನ್ನ ಉತ್ತರ: ಹೌದು. ಇದು ಇವನು ಮಾಡಿದ ದೊಡ್ಡ ತಪ್ಪು. ಆ ಸಭೆಯಲ್ಲಿ ವಿದುರನನ್ನು ಬಿಟ್ಟು ಯಾರೂ ಕೂಡ , ವಸ್ತ್ರಾಪಹರಣ ವಿರೋಧಿಸಲಿಲ್ಲ. ಇಲ್ಲಿ ಕರ್ಣನ ಮನಸ್ಸು ದ್ರೌಪದಿ ಇವನಿಗೆ ಮಾಡಿದ ಅವಮಾನವನ್ನು ನೆನೆಸಿತು(ದ್ರೌಪದಿಯ ಮದುವೆಯ ಸಂದರ್ಭ), ಅಲ್ಲದೆ ತನ್ನ ಗೆಳೆಯನನ್ನು ಅವಮಾನಿಸಿದ ಹೆಣ್ಣಿಗೆ ಒಂದು ಪಾಠ ಕಲಿಸಬೇಕು ಅನ್ನೋ ಒಂದು ಹುಚ್ಚು ಅವನನ್ನು ಈ ತರಹ ಮಾಡಲು ಪ್ರೇರೇಪಿಸಿತು ಅನ್ನಬಹುದು. ಮೊದಲೇ ಹೇಳಿದಂತೆ ಕೆಟ್ಟ ಸಹವಾಸ ಯಾವುದು ಒಳ್ಳೆಯದು, ಯಾವುದು ಅಲ್ಲ ಅನ್ನೋದನ್ನು ಮರೆಯಿಸುತ್ತದೆ.
ಪ್ರಶ್ನೆ 5. ಭೀಷ್ಮರು, ಕರ್ಣ ಅಹಂಕಾರಿ ಎಂದು ಕುರುಕ್ಷೇತ್ರದ ಯುದ್ಧದಲ್ಲಿ ಯಾಕೆ ದೂರಿಟ್ಟರು?
ನನ್ನ ಉತ್ತರ: ಇದಕ್ಕೆ ಹಲವು ಕಾರಣಗಳು. ಭೀಷ್ಮರಿಗೆ ಕರ್ಣ ಪಾಂಡು ಪುತ್ರ ಅನ್ನೋದು ಮೊದಲೇ ಗೊತ್ತಿತ್ತು. ಅವರಿಗೆ ಅಣ್ಣ ತಮ್ಮನ ನಡುವೆ ಯುದ್ಧ ತಮ್ಮ ಸೇನಾಪತಿಯ ಅಧಿಕಾರದಲ್ಲಿ ನಡೆಯೋ ಮನಸಿರಲಿಲ್ಲ. ಅಲ್ಲದೆ ಕರ್ಣನಿಗೆ ಇದ್ದ ಒಂದೇ ಒಂದು ಲಕ್ಷ್ಯ ಎಂದರೆ ಅರ್ಜುನನ್ನು ಕೊಲ್ಲುವುದು, ಇದು ಸುತರಾಂ ಭೀಷ್ಮರಿಗೆ ಇಷ್ಟವಿರಲಿಲ್ಲ. ಅಲ್ಲದೆ ಕರ್ಣನ ಅಹಂಕಾರ (ತಾನೊಬ್ಬನೇ ಶ್ರೇಷ್ಠ ) ಅವನನ್ನು ಭೀಷ್ಮರ ಮನಸ್ಸು ಗೆಲ್ಲಲಿಲ್ಲ. ಯಾವುದೇ ಸೇನಾಧಿಪತಿ ತನ್ನ ಸೈನ್ಯದೊಳಗೆ ಯಾರು ಇರಬೇಕು ಯಾರಿಲ್ಲ ಅನ್ನೋದನ್ನು ನಿರ್ಧರಿಸುವ ಹಕ್ಕಿತ್ತು. ಇನ್ನೂ ಒಂದು ಕಾರಣ ಎಂದರೆ, ಭೀಷ್ಮರ ಗುರುಗಳು ಪರಶುರಾಮರು. ತನ್ನ ಗುರುಗಳಿಗೆ ಅವಮಾನಿಸಿದ ಕರ್ಣನ ಬಗ್ಗೆ ಒಂದು ತಾತ್ಸಾರ ಇದ್ದೆ ಇತ್ತು.
ಪ್ರಶ್ನೆ 6. ಅಭಿಮನ್ಯುವಿನ ಮೋಸದ ಹತ್ಯೆಯಲ್ಲಿ ಕರ್ಣನೂ ಭಾಗಿ ಯಾಗುತ್ತಾನೆ.
ನನ್ನ ಉತ್ತರ: ಮೊದಲೇ ಹೇಳಿದಂತೆ ಕೆಟ್ಟ ಸಹವಾಸ ಯಾವುದು ಒಳ್ಳೆಯದು, ಯಾವುದು ಅಲ್ಲ ಅನ್ನೋದನ್ನು ಮರೆಯಿಸುತ್ತದೆ.ಈ ಕಾರಣಕ್ಕೆ ಈ ಹತ್ಯೆಯಲ್ಲಿ ಕರ್ಣನೂ ಭಾಗಿಯಾಗುತ್ತಾನೆ.
ಪ್ರಶ್ನೆ 7. ದುರ್ಯೋಧನನ ಆಪ್ತಮಿತ್ರ ಅಂತ ಹೇಳುತ್ತಾರೆ.. ಮಿತ್ರನ ಕರ್ತವ್ಯ ದುರ್ಯೋಧನನ ಎಲ್ಲಾ ಕಾರ್ಯಗಳನ್ನೂ ಯೋಜನೆಗಳನ್ನು ಅನುಮೋದಿಸುವದು ಮಾತ್ರವೇ? ಕೆಟ್ಟ ದಾರಿಯಲ್ಲಿ ಹೋಗುತ್ತಿರುವ ಮಿತ್ರನನ್ನು ಸರಿ ದಾರಿಗೆ ತರುವ ಕರ್ತವ್ಯ ಒಬ್ಬ ಒಳ್ಳೆಯ ಮಿತ್ರನದಲ್ಲವೆ? ಅದನ್ನೆಂದೂ ಕರ್ಣ ಮಾಡಲೇ ಇಲ್ಲ.
ನನ್ನ ಉತ್ತರ: ನಿಮ್ಮಪ್ರಶ್ನೆ ಸರಿಯಾಗಿದೆ. ಕೆಟ್ಟ ದ್ದಾರಿಯಲ್ಲಿ ಹೋಗುವ ಮಿತ್ರನನ್ನು ಸರಿ ದಾರಿಗೆ ತರೋದು ಮಿತ್ರನ ಲಕ್ಷಣ. ಆದರೆ ಇಬ್ಬರೂ ಮಿತ್ರರು ತಾವು ನಡೆಯುತ್ತಿರುವ ದಾರಿ ಸರಿ ಎಂದು ನಿರ್ಧರಿಸಿದರೆ ಇವರನ್ನು ಸರಿ ದಾರಿಗೆ ತರೋದು ಯಾರು? ಕರ್ಣನಿಗೆ ಒಂದು ಮಾತು ಗೊತ್ತಾಗಿತ್ತು, ದುರ್ಯೋಧನನಿಗೆ ಬುದ್ದಿ ಹೇಳುವುದೆಂದರೆ ಭೋರ್ಗಲ್ಲ ಮೇಲೆ ನೀರು ಸುರಿದಂತೆ. ಅಲ್ಲದೆ ಇಲ್ಲಿ ದುರ್ಯೋಧನ ಅತಿಯಾದ ಮಿತ್ರತ್ವ, ಆತ್ಮೀಯತೆ ಇವನನ್ನು ಹಲವು ಸಲ ತನ್ನ ಮಾತುಗಳನ್ನು ತಡೆ ಹಿಡಿಯುತ್ತದೆ. ಇದಕ್ಕೆ ಅಲ್ಲವೇ ಹೇಳೋದು ಒಬ್ಬರ ಋಣದಲ್ಲಿ ಬಿದ್ದಾಗ, ಅದರಿಂದ ಮೇಲೆ ಬರೋದು ತುಂಬಾ ಕಷ್ಟ. ಕರ್ಣನಿಗೆ ದುರ್ಯೋಧನನ್ನು ಸರಿ ದಾರಿಗೆ ತರುವ ಲಕ್ಷವಿರಲಿಲ್ಲ. ಅವನಿಗೆ ಇದ್ದ ಒಂದೇ ಒಂದು ಲಕ್ಷ್ಯ ಅರ್ಜುನನನ್ನು ಸೋಲಿಸುವುದು. ಇದಕ್ಕೆ ದುರ್ಯೋಧನಿಗಿಂತ ಬೇರೆ ಏಣಿ ದೊರಕಲು ಸಾಧ್ಯವಿರಲಿಲ್ಲ.
ಮೊದಲೇ ಹೇಳಿದಂತೆ ನನ್ನ ಅಭಿಪ್ರಾಯಗಳು ಸರಿ ಇರಬಹುದು, ತಪ್ಪಿರಬಹುದು. ಹಾಗೇನಾದರೂ ಇದ್ದರೆ ನಾನು ನನ್ನ ಗ್ರಹಿಕೆಯನ್ನು ಸರಿಪಡಿಸಿಕೊಳ್ಳುತ್ತೇನೆ. ಮಹಾಭಾರತದ ಬಗ್ಗೆ ಹಲವಾರು ಅಭಿಪ್ರಾಯಗಳು ಇವೆ. ಇಂದಿಗೂ ಈ ಅಭಿಪ್ರಾಯ ಸರಿ ಅನ್ನೋ ಹಾಗಿಲ್ಲ. ಇದೂ ಇನ್ನೂ ಅಧ್ಯಯನದ ವಸ್ತು. ನಾನೂ ಕೂಡ ಇನ್ನೂ ಹಲವಾರು ಲೇಖಕರ ಪುಸ್ತಕಗಳು ಓದುವುದು ಬಾಕಿ ಇವೆ. ಅವೆಲ್ಲ ಓದಿದ ಮೇಲೆ, ಕೆಲವೊಂದು ಅಭಿಪ್ರಾಯ ಬದಲಾಗಲೂ ಬಹುದು.
ನಿಮ್ಮ ಅಭಿಪ್ರಾಯ ತಿಳಿಸಿ.
Comments
Post a Comment