ತಂದೆಯವರ ನೆನಪುಗಳು ಭಾಗ - ಐದು
ಮುಂದಿನ ಅವತರಿಣಿಕೆ ಬರೆಯದ್ದೇ ಅದೆಷ್ಟೋ ದಿನಗಳು(ಕೆಲವು ತಿಂಗಳುಗಳು) ಕಳೆದು ಹೋದವು. ಆಫೀಸಿನ ಬಿಡುವಿಲ್ಲದ ಕೆಲಸ ನನಗೆ ಬರೆಯುವ ಸಮಯವನ್ನೇ ನೀಡಲಿಲ್ಲ. ಅದೆಷ್ಟೋ ವಾಚಕರು ಮುಂದಿನ ಸಂಚಿಕೆಗಾಗಿ ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಲದಿಂದ ವಾರಕ್ಕೊಂದು ಸಂಚಿಕೆ ಬರೆಯುವ ಅಭ್ಯಾಸ ಇಟ್ಟು ಕೊಳ್ಳುವ ಪ್ರಯತ್ನ ನನ್ನದು. ತಡವಾಗಿ ಈ ಸಂಚಿಕೆ ಬರೆದದ್ದಕ್ಕೆ ಕ್ಷಮೆ ಇರಲಿ. ನಿಮ್ಮ ಪ್ರೀತಿ ಸದಾ ನನ್ನ ಬರವಣಿಗೆ ಮೇಲೆ ಇದ್ದು ನನ್ನನ್ನು ಹೀಗೆಯೇ ಇನ್ನೂ ಚೆನ್ನಾಗಿ ಬರೆಯಲು ಪ್ರೇರಣೆ ನೀಡುತ್ತಿರಲಿ ಎಂದು ಆಶಿಸುತ್ತೇನೆ.
ಕೊನೆಯ ಸಂಚಿಕೆಯನ್ನು ಈ ಕೆಳಗಿನ ಕೆಲವು ಪ್ರಶ್ನೆಗಳೊಂದಿಗೆ ಮುಗಿಸಿದ್ದೆ . ಇವರು ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಹೇಗೆ ನಾಲ್ಕೂ ತರಗತಿಗಳನ್ನು ನೋಡಿಕೊಳ್ಳುತ್ತಿದ್ದರು? ಶಿಕ್ಷಕರಾಗುವ ಮುಂಚೆ ಇವರ ಮೇಲೆ ಹೊಲದಲ್ಲಿ ಹಲ್ಲೆ ಏಕೆ ನಡೆದಿತ್ತು? ಒಮ್ಮೆ ಹಾಲಿನ ಟ್ಯಾಂಕರಿನಲ್ಲಿ ಕುಳಿತು ಏಕೆ ಪ್ರಯಾಣ ಮಾಡಿದರು?
ಇವರು ಇನ್ನೂ ಹಳ್ಳಿಖೇಡದಲ್ಲಿ ಇದ್ದ ಸಮಯವದು(ಇನ್ನೂ ಶಿಕ್ಷಕ ವೃತ್ತಿಗೆ ಬಂದಿರಲಿಲ್ಲ) . ಮೊದಲೇ ಹೇಳಿದಂತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು ಅದರ ಜೊತೆಗೆ ಪೌರೋಹಿತ ವೃತ್ತಿ ಕೂಡ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ "ರಾಮ್ ಕಿಶನ್" ಮಹಾರಾಜ್ ಅವರ ಪರಿಚಯ ಆಯಿತು. ಅವರೊಡನೆ ಬಹಳಷ್ಟು ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಒಂದು ದಿನ ಹೀಗೆ ಮಾತನಾಡುತ್ತ ಅವರು ನಮ್ಮ ತಂದೆಯವರಿಗೆ "ನೀನು ಗುರುಚರಿತ್ರೆಯ ಹತ್ತನೇ ಅಧ್ಯಾಯ ದಿನಾಲು ಪಠಣ ಮಾಡು, ಒಳ್ಳೆಯದಾಗುತ್ತೆ ಅಂದರಂತೆ". ಗುರುಚರಿತ್ರೆಯ ಹತ್ತನೇ ಅಧ್ಯಾಯದಲ್ಲಿ ಗುರು ದತ್ತಾತ್ರೇಯರು ತಮ್ಮ ಶಿಷ್ಯನನ್ನು ಕಳ್ಳರಿಂದ ರಕ್ಷಿಸಿ ಪ್ರಾಣದಾನ ಮಾಡುತ್ತಾರೆ. ಆವಾಗ ಅವರಿಗೆ ಯಾಕೆ ಅದನ್ನು ಓದಲು ಹೇಳಿದರು ಅನ್ನೋದು ಅರ್ಥವಾಗಲಿಲ್ಲ. ಅಂದಿನಿಂದ ದಿನಾಲೂ ಗುರುಚರಿತ್ರೆ ಹತ್ತನೇ ಅಧ್ಯಾಯ ಪಠಣ ಮಾಡಲು ಆರಂಭಿಸಿದರು. ಇದಾಗಿ ಕೆಲವೇ ತಿಂಗಳುಗಳು ಕಳೆದಿರಬೇಕು. ಹೊಲದಲ್ಲಿ ಕೆಲವೊಮ್ಮೆ ರಾಶಿಯ ಸಮಯದಲ್ಲಿ ರಾತ್ರಿ ಅಲ್ಲೇ ಮಲಗಬೇಕಾಗುತ್ತಿತ್ತು. ಅದೊಂದು ಒಂದು ರಾತ್ರಿ ಹೊಲದಲ್ಲಿ ಮಲಗಿದ್ದಾಗ, ಇವರ ಮೇಲೆ ಬಡಿಗೆಯಿಂದ ಮೂರು ನಾಲ್ಕು ಜನ ಇವರು ಮತ್ತು ಇವರ ತಮ್ಮನ ಮೇಲೆ ಹಲ್ಲೆ ಮಾಡಿದರು. ಅದೇನೋ ಅಂದು ಪ್ರತಿಸಲ ಮಲಗುವ ರೀತಿಯ ಬದಲು ಉಲ್ಟಾ ಮಲಗಿದ್ದರು. ಹಲ್ಲೆ ಮಾಡಿದವರು ಇವರ ತಲೇನೆ ಇರಬೇಕು ಎಂದು ಹೊಡೆದಿದ್ದಾರೆ. ತಲೆಗೆ ಬೀಳೋ ಏಟು ಕಾಲಿಗೆ ಬಿದ್ದಿದೆ. ಅದೇ ಸಮಯಕ್ಕೆ ಇವರ ಧ್ವನಿ ಕೇಳಿ, ಹತ್ತಿರದ ಹೊಲದವರು ಬಂದಾಗ ಹಲ್ಲೆ ಮಾಡಿದವರು ಓಡಿ ಹೋಗಿದ್ದಾರೆ. ಜೀವ ಉಳಿದಿದೆ. ಅಂದು ಅವರಿಗೆ ಅವರ ಗುರುಗಳು ಗುರುಚರಿತ್ರೆಯ ಅಧ್ಯಾಯ ಓದಲು ಯಾಕೆ ಹೇಳಿದರು ಎಂದು ಅರ್ಥವಾಯಿತು. ಜೀವ ಉಳಿದದಕ್ಕೆ ಗುರುಗಳಿಗೆ ಧನ್ಯವಾದ ಅರ್ಪಿಸಿ, ಕೊನೆಯ ತನಕವೂ ದಿನಾಲೂ ಹತ್ತನೇ ಅಧ್ಯಾಯದ ಪಠಣ ಮಾಡುತ್ತಿದ್ದರು. ಗುರು ಚರಿತ್ರೆ ಸಪ್ತಾಹ ಅದೆಷ್ಟೋ ಸಲ ಪಠಣ ಮಾಡಿದರು.
ಯಾವಾಗಲೂ ನಮಗೆ ಮತ್ತು ಮನೆ ಪಾಠಕ್ಕೆ ಓದಲು ಬರುತ್ತಿದ್ದ ಮಕ್ಕಳಿಗೆ ಇವರು ಹೇಳುತ್ತಿದ್ದ ಒಂದು ಮಾತು "ಹುಡುಗಿಯರ ಮುಂದೆ ಶೋಕಿ ಮಾಡಬೇಡಿ" ಅಂತ. ನಮಗೆ ಅದೇಕೆ ಹೀಗೆ ಹೇಳುತ್ತಾರೆ ಅನ್ನೋದು ಅಷ್ಟು ಅರ್ಥವಾಗುತ್ತಿರಲಿಲ್ಲ. ಒಂದು ದಿನ ಅವರ ಜೀವನದಲ್ಲಿ ನಡೆದ ಕಥೆ ಹೇಳಿ ಇದು ಯಾಕೆ ಹೇಳುತ್ತಿದ್ದೇನೆ ಅಂತ ನಮಗೆ ಅರ್ಥ ಮಾಡಿಸಿದರು.
ನಮ್ಮ ಅಮ್ಮನ ಊರು ಬೀದರ್ ಪಟ್ಟಣ. ಅವರ ಮನೆಯ ಇಷ್ಟ ದೇವರು ಮುದ್ಗಲ್ (ಮಹಾರಾಷ್ಟ್ರದ ಪರಭಣಿಯ ಹತ್ತಿರ ಇದೆ) ನರಸಿಂಹ. ನಮ್ಮ ಅಮ್ಮನ ಬಳಗ ಮತ್ತು ತಂದೆಯವರ ಬಳಗ ಹತ್ತಿರದ ಸಂಬಂದಿಕರು. ಅಮ್ಮನ ಚಿಕ್ಕಪ್ಪನ ಮಗನ ಜಾವಳ (ಕೇಶ ಮುಂಡನ) ಕಾರ್ಯಕ್ರಮದ ಸಲುವಾಗಿ ಅವರ ಜೊತೆ ತಂದೆಯವರು ಕೂಡ ಮುದ್ಗಲ್ ಊರಿಗೆ ಹೋಗಿದ್ದರು. ಅಮ್ಮನ ಬಳಗದ ಜೊತೆಗೆ ಅವರ ನೆರೆ ಮನೆಯ ಹುಡುಗ ಕೂಡ ಹೊರಟನು. ಹಲವು ತಾಸುಗಳ ಪ್ರಯಾಣದ ನಂತರ, ಮುದ್ಗಲ್ ಊರಿಗೆ ಬಂದು ತಲುಪಿದರು. ಎಲ್ಲರೂ ದೇವಸ್ಥಾನದ ಹತ್ತಿರ ಹೋದಾಗ, ಈ ನೆರೆ ಮನೆಯ ಹುಡುಗ, ಅಲ್ಲೇ ಹತ್ತಿರದ ಕಲ್ಯಾಣಿ(ಸಣ್ಣ ಕೆರೆ) ಹತ್ತಿರ ಬಂದಿದ್ದಾನೆ. ಅಲ್ಲಿ ಕೆಲವೊಂದು ಹುಡುಗಿಯರು ಕುಳಿತಿದ್ದರು. ಈ ನೆರೆ ಮನೆಯ ಹುಡುಗ ಮೊದಲೇ ತರುಣ. ಆ ಹುಡುಗಿಯರನ್ನು ನೋಡಿ, ಅವರ ದೃಷ್ಟಿ ತನ್ನೆಡೆಗೆ ಬರುವಂತೆ (impress) ಏನು ಮಾಡುವುದು ಎಂದು ಯೋಚಿಸಿ, ಆ ಕಲ್ಯಾಣಿಯಲ್ಲಿ ಜಿಗಿದು ಈಜಲು ನಿರ್ಧರಿಸಿದ್ದಾನೆ. ಅವನಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ಆ impress ಮಾಡುವ ಹುಚ್ಚಿನಲ್ಲಿ, ಕಲ್ಯಾಣಿಯೊಳಗೆ ಜಿಗಿದೇ ಬಿಟ್ಟನು. ಇದೆ ನೋಡಿ ಅವನು ಮಾಡಿದ ತಪ್ಪು!!
ಮುಳುಗು ಹಾಕಿದವನು ಎಷ್ಟೋ ಹೊತ್ತಾದರೂ ಹೊರಗೆ ಬರದೇ ಇರುವುದನ್ನು ನೋಡಿದ ಕೆಲವರು, ಬಂದು ಸುದ್ದಿ ತಿಳಿಸಿದ್ದಾರೆ. ಈಜು ಬರುವವರು(ನಮ್ಮ ತಂದೆಯವರೂ ಕೂಡ ಉತ್ತಮ ಈಜು ಪಟು), ಕಲ್ಯಾಣಿಗೆ ಜಿಗಿದು ಕೆಲವು ತಾಸುಗಳ ಬಳಿಕ, ನೆರೆ ಮನೆ ಹುಡುಗನ ಶವ ಮೇಲಕ್ಕೆ ತಂದರು. ಎಂಥ ಪರಿಸ್ಥಿತಿ ನೋಡಿ.. ಆ ಊರಲ್ಲಿ ಪೊಲೀಸ್ ಸ್ಟೇಷನ್ ಇರಲಿಲ್ಲ. ಶವ ವಾಪಸು ತೆಗೆದು ಕೊಂಡು ಹೋಗಲು ಊರವರು ಬಿಡುತ್ತಿಲ್ಲ. ಪೊಲೀಸ್ ದೂರಾಗದೆ, ಮಹಜರು ಮಾಡದೆ ಶವ ತಗೊಂಡು ಹೋಗಲು ಸಾಧ್ಯವಿಲ್ಲ. ಹೋದವರಲ್ಲಿ ನಮ್ಮ ತಂದೆಯವರು ಮತ್ತು ನಮ್ಮ ಅಮ್ಮನ ಚಿಕ್ಕಪ್ಪ (ನಮಗೆ ತಾತ) ಹಿರಿಯರು. ಇವರಿಬ್ಬರು ಪೊಲೀಸ್ ಸ್ಟೇಷನ್ ಗೆ ದೂರು ಕೊಡಲು ಹೊರಟು ನಿಂತರು. ಹತ್ತಿರದ ಪೊಲೀಸ್ ಸ್ಟೇಷನ್ ಇರುವುದು ಪತ್ರಿ ಎಂಬ ಊರಿನಲ್ಲಿ(ಸರಿ ಸುಮಾರು ಮೂವತ್ತು ಕಿಲೋಮೀಟರು ದೂರ). ಆ ಕಾಲದಲ್ಲಿ ಬಸ್ ಪ್ರಯಾಣ ತುಂಬಾ ದುರ್ಲಭ. ಆ ಊರಿಗೆ ಬರುತ್ತಿದ್ದ ಒಂದೇ ಒಂದು ಬಸ್ ಅಂದಿನ ಪ್ರಯಾಣ ಮುಗಿಸಿತ್ತು. ತಡ ಮಾಡಿದರೆ ಹೆಣ ಕೊಳೆಯಲು ಆರಂಭಿಸುತ್ತದೆ. ಏನು ಮಾಡುವುದು. ಇದ್ದ ಒಂದೇ ಗತಿ ಎಂದರೆ , ಹಾಲಿನ ಟ್ಯಾಂಕರ್ ಪ್ರಯಾಣ ಮಾತ್ರ. ಮುಂದೆ ಕೂಡಲು ಜಾಗವಿಲ್ಲ. ಸರಿ ಏನು ಮಾಡುವುದು, ಟ್ಯಾಂಕಿನೊಳಗೆ ಕುಳಿತು ಸರಿ ಸುಮಾರು ಎರಡು ತಾಸು ಪ್ರಯಾಣ ಮಾಡಿ ಪೊಲೀಸ್ ಸ್ಟೇಷನ್ ತಲುಪಿದರು. ಅಲ್ಲಿಂದ ಪೊಲೀಸ್ ಕರೆದುಕೊಂಡು ಬಂದು, ಮಹಜರು ಮಾಡಿ ವಾಪಸ್ ಊರಿಗೆ ಬರುವಷ್ಟರಲ್ಲಿ ಸಾಕೋ ಸಾಕಾಯಿತು. ಈ ಕಥೆ ಹೇಳಿ, ಇಂತಹ ಅನರ್ಥ ಮಾಡಿಕೊಳ್ಳಬೇಡಿ ಅನ್ನೋದು ಅವರ ಉದ್ದೇಶವಾಗಿತ್ತು.
ಇವರ ಶಾಲೆಗೆ ಇವರೊಬ್ಬರೇ ಗುರುಗಳು,ಮುಖ್ಯೋಪಾಧ್ಯಾಯರು. ನಾವೆಲ್ಲಾ ಅದಕ್ಕೆ ತಮಾಷೆಗೆ "ಮುಗು(ಮುಖ್ಯ ಗುರುಗಳು)" ಅಂತ ಹೇಳುತ್ತಿದ್ದೆವು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯದು. ಒಂದರಿಂದ ನಾಲ್ಕನೇ ತರಗತಿಯ ತನಕ ಇವರೊಬ್ಬರೇ ಶಿಕ್ಷಕರು. ಒಂದು ದೊಡ್ಡ ರೂಮಿನಲ್ಲಿ(hall ತರಹ ) ನಾಲ್ಕು ವರ್ಗ ಮಾಡಿದ್ದರು. ಇವರ ಒಂದು ಶಬ್ದ ಇಡೀ ನಾಲ್ಕೂ ತರಗತಿಗೆ ಕೇಳಿಸುತಿತ್ತು. ಯಾವುದೇ ತರಗತಿಯಲ್ಲಿ ಮಕ್ಕಳು ಗಲಾಟೆ ಮಾಡಿದಾಗ , ಇವರ ಒಂದು ಶಬ್ದಕ್ಕೆ ನಾಲ್ಕೂ ತರಗತಿಗಳು ನಿಶಬ್ದವಾಗಿ ಬಿಡುತ್ತಿದ್ದವು. ಎಷ್ಟೋ ಸಲ ಕೆಲವು ಮಕ್ಕಳು ಹೆದರಿದ್ದೂ ಇದೆ. ಮಕ್ಕಳೆಂದರೆ ಎಷ್ಟು ಪ್ರೀತಿಯೋ ಅಷ್ಟೇ ಓದಿನ ಬಗ್ಗೆ ತುಂಬಾ ಕಠಿಣ. ವರುಷಕ್ಕೆ ಒಂದೆರಡು ಸಲ ನಾನು ಇವರ ಶಾಲೆಗೆ (ನಮಗೆ ರಜೆ ಇದ್ದಾಗ) ಹೋಗುತ್ತಿದ್ದೆ. ಆಗ ಆ ಮಕ್ಕಳು ತೋರಿಸಿದ ಪ್ರೀತಿ ಮರೆಯಲು ಸಾಧ್ಯವಿಲ್ಲ. ಆ ಗೌರವ, ಆದರ ಎಲ್ಲಕಿಂತ ಮಿಗಿಲು.
ನಾಲ್ಕನೇ ತರಗತಿಯಲ್ಲಿ ಅವಳಿ ಜವಳಿ ಮಕ್ಕಳು ಕಲಿಯುತ್ತಿದ್ದರು. ಅಣ್ಣ ಓದಿನಲ್ಲಿ ಚುರುಕು ಮತ್ತು ಅವನ ಅಕ್ಷರ ತುಂಬಾ ಮುದ್ದಾಗಿದ್ದವು. ತಂದೆಯವರು ಮಕ್ಕಳ ಪರೀಕ್ಷಾ ಪೇಪರ್ ಮನೆಗೆ ತಂದಾಗ ಎಷ್ಟೋ ಸಲ ನಾನು ಅದನ್ನು ಪರಿಶೀಲನೆ(evaluation) ಮಾಡಿದ್ದೇನೆ. ತಮ್ಮ ಓದಿನಲ್ಲಿ ಹಿಂದೆ ಆದರೂ ಕ್ರೀಡೆಯಲ್ಲಿ ಮುಂದೆ. ಅದೊಂದು ದಿನ, ತಂದೆಯವರು ಗಮನ ಆ ಅವಳಿ ಜವಳಿ ತಮ್ಮನ ಕಡೆಗೆ ಹೋಗಿದೆ. ಏನೋ ತಪ್ಪು ನಡೆದಿದೆ ಎಂದು ಗೊತ್ತಾಗಿದೆ. ಅವನ ಪಾದ ನೋಡಿದಾಗ, ದೊಡ್ಡ ಇನ್ನೂ ಹಸಿ ಗಾಯ, ಮೇಲೆ ಅರೆಬರೆ ಹೊಲೆದ ಹೊಲಿಗೆಗಳು. ಏನಾಗಿದೆ ಅಂದು ಕೇಳಿದಾಗ ಅವನು ಈ ಮುಂದಿನ ಸುದ್ದಿ ಹೇಳಿದ್ದಾನೆ. ಮೊದಲ ದಿನ ಸಂಜೆ, ಮನೆಗೆ ಹೋಗುವಾಗ ಒಂದು ಮಾವಿನ ಮರ ಕಾಣಿಸಿದೆ. ಮಾವಿನಕಾಯಿ ತೆಗೆಯುವ ಅವಸರದಲ್ಲಿ , ತಮ್ಮ ಮರ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಕೆಳಗೆ ಚೂಪಾದ ವಸ್ತು ಅಂಗಾಲಿಗೆ ತಗುಲಿ, ದೊಡ್ಡ ಗಾಯವಾಗಿದೆ. ಅದೇ ಗಾಯದಿಂದ ಮನೆಗೆ ಹೋಗಿದ್ದಾನೆ. ಅವರ ಕುಟುಂಬದಲ್ಲಿ ಬಡತನ. ರಾತ್ರಿ ಅವರ ಅಪ್ಪ ಅಮ್ಮ ಇಬ್ಬರೂ ಸೇರಿ, ಮಗನ ಅಂಗಾಲನ್ನು, ದೊಡ್ಡ ಸೂಜಿ ದಾರ ಬಳಸಿ ಹೊಲೆದಿದ್ದಾರೆ. ಹೊಲೆಯುವಾಗ ಅವನು ಅದೆಷ್ಟು ನೋವು ಅನುಭವಿಸಿರಬೇಕು , ದೇವರೇ ಬಲ್ಲ. ಈ ಮಾತು ಕೇಳಿ, ತಂದೆಯವರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೊಸ ಹೊಲಿಗೆ ಹಾಕಿಸಿ, ಮನೆಗೆ ಕಳಿಸಿದ್ದಾರೆ. ಮನುಷ್ಯನನ್ನು ಬಡತನ ಏನೆಲ್ಲಾ ಮಾಡಿಸುತ್ತದೆ ಅನ್ನೋದಕ್ಕೆ ಇದೊಂದು ನಿದರ್ಶನ.
ಇನ್ನಷ್ಟು ರೋಚಕ ಸುದ್ದಿಗಳು, ಮುಂದಿನ ಸಂಚಿಕೆಯಲ್ಲಿ. ಇವರ ತಮ್ಮನ ಮಕ್ಕಳನ್ನು ಏಕೆ ಊರಿಗೆ ಕರೆದುಕೊಂಡು ಬಂದರು. ಅದರಿಂದ ಜೀವನದಲ್ಲಿ ಕಲಿತ ಪಾಠವೇನು? ಮಗನನ್ನು ಮೊದಲ ಸಲ ಬೇರೆ ಊರಿಗೆ ಓದಿಗೆ ಕಳಿಸಿದಾಗ ನಡೆದ ಘಟನೆಗಳು ಏನು? ಎರಡನೇ ಮಗ ಉಜಿರೆ ಬದಲಾಗಿ ರಾಮಕುಂಜ ಕಾಲೇಜು ಏಕೆ ಸೇರಬೇಕಾಯಿತು? ಇದು ಮುಂದಿನ ಘಟನೆಗಳಿಗೆ ಹೇಗೆ ಸಾಕ್ಷಿಯಾಯಿತು? ಮನೆಪಾಠ (ಟ್ಯೂಷನ್) ನಲ್ಲಿ ನಡೆದ ಕೆಲವು ಎಂದೂ ಮರೆಯಲಾರದ ಘಟನೆಗಳು ಏನು?
ನಿಮ್ಮ ಪ್ರೀತಿ ಸದಾ ಇರಲಿ. ನಿಮ್ಮ ಅನಿಸಿಕೆ ತಿಳಿಸಿರಿ.
ನಿಮ್ಮ ಪ್ರೀತಿಯ,
ದಿಲೀಪ್ ದೀಕ್ಷಿತ್
Comments
Post a Comment