ಕೆಂಪು ಡಬ್ಬಿ ಬಸ್ ಪಯಣದ ಸಿಹಿ ಕಹಿ ನೆನಪುಗಳ ಮಾಲಿಕೆ- ಭಾಗ ಒಂದು

ಈಗಿನ ಜನರಿಗೆ ಬಸ್ ಅದರಲ್ಲೂ ಕೆಂಪು ಡಬ್ಬಿಯ ಬಸ್ ಅಂದರೆ ಒಂಥರಾ ಅಲರ್ಜಿ. ಕಾಲ ಬದಲಾದಂತೆ ವಾಹನಗಳ ಸೌಕರ್ಯ ಬದಲಾಯಿತು. ಈಗ ವಿಮಾನದ ದರವೇ ಅಗ್ಗ ಇರುವಾಗ,  ಜನ ಬಸ್ ಕಡೆ ಮುಖ ಮಾಡೋದು ತುಂಬಾ ಕಡಿಮೆ ಆಗಿದೆ. ಯಾವುದೇ ವಾಹನ ಸಿಗದೇ ಹೋದಾಗ ಬಸ್ ಏರೋದು ಉಂಟು. ಈಗಿನ ಮಕ್ಕಳಿಗೆ ಕೆಂಪು ಡಬ್ಬಿಯಲ್ಲಿ ದೂರ ಊರಿನ ಪ್ರಯಾಣದ ಅನುಭವ ಇಲ್ಲವೇ ಇಲ್ಲ. ನಾವೂ ಕೂಡ ಮಕ್ಕಳನ್ನು ಸುಖವಾಗಿ ಕರೆದುಕೊಂಡು ಹೋಗಬೇಕು ಅನ್ನೋ ಬಯಕೆಯಲ್ಲಿ ವೋಲ್ವೋ , ಸ್ಲೀಪರ್ ಬಸ್ ಗಳನ್ನು ಅವಲಂಬಿಸಲು ಪ್ರಾರಂಭಿಸಿದ್ದೇವೆ. 

ಆದರೆ ಆ ಕೆಂಪು ಡಬ್ಬಿ ಬಸ್ ಪಯಣದ ಅನುಭವ ಈಗಿನ ದುಬಾರಿ ವಾಹನಗಳು ಕೊಡಲು ಸಾಧ್ಯವಿಲ್ಲ. ಬೇರೆ ಗತಿ ಇರದೇ ಬಸ್ ಪಯಣ ಮಾಡಬೇಕಾದ ಅನಿವಾರ್ಯತೆ ಇರುತಿತ್ತು. ಆದರೂ ಆ ಕಷ್ಟದಲ್ಲೇ ಒಂದು ಖುಷಿಯನ್ನು ಕಂಡುಕೊಂಡು ಪ್ರಯಾಣ ಮಾಡುತ್ತಿದ್ದ ಕಾಲವದು. ನಾನು  ಈ ಲೇಖನದ ಮೂಲಕ ಆ ಹಳೆ ನೆನಪುಗಳನ್ನು ಮತ್ತೆ ಒಂದು ಮೆಲುಕು ಹಾಕುವ ಸಾಹಸಕ್ಕೆ ಇಳಿದಿದ್ದೇನೆ. ಈ ಲೇಖನ ಓದಿದ ಮೇಲೆ ನಿಮಗೂ ನಿಮ್ಮ ಕೆಂಪು ಡಬ್ಬಿಯ ಅನುಭವವನ್ನು ನೆನಪಿಗೆ ತಂದರೆ ನನ್ನ ಈ ಪ್ರಯತ್ನ ಸಾರ್ಥಕವಾದಂತೆ.

ನಾವು ಸಣ್ಣವರು ಇದ್ದಾಗ ತಂದೆಯವರು ಕೆಲಸ ಮಾಡುತ್ತಿದ್ದ ಊರು (ದಕ್ಷಿಣ ಕನ್ನಡದ ಹೊಸಮಠ ಎಂಬ ಗ್ರಾಮ)  ನಿಂದ ನಮ್ಮ ಹುಟ್ಟೂರು (ಬೀದರ್ ಹತ್ತಿರದ ಹಳ್ಳಿಖೇಡ(ದೊಡ್ಡ)) ಗೆ ಮಾಡುತಿದ್ದ ಬಸ್ ಪ್ರಯಾಣ ಈಗಲೂ ತುಂಬಾ ನೆನಪಿಗೆ ಬರುತ್ತದೆ. ಪ್ರತಿ ವರ್ಷ ಸರಾಸರಿ ೨ ಸಲದಂತೆ ಸುಮಾರು ೧೮ ವರುಷ ನಮ್ಮ ಪಯಣದ ಏಕ್ಯೆಕ ವಾಹನ ಕೆಂಪು ಡಬ್ಬಿಯ ಬಸ್. ಹುಟ್ಟೂರಿಗೆ ಹೋಗುತ್ತಾ ಇದ್ದೇವೆ ಎಂದರೆ ಏನೋ ಒಂದು ಖುಷಿ, ಅದರ ಜೊತೆಗೆ ಬಸ್ ಪಯಣ ನಮ್ಮ ಖುಷಿ ಮತ್ತಿಷ್ಟು ಹೆಚ್ಚಿಸುತಿತ್ತು. ಕಾರಣ ಹೊಸ ಹೊಸ ಊರುಗಳ ದರ್ಶನ, ಹೊಸ ಜನರ ಪರಿಚಯ, ಜೊತೆಗೆ ಓದಿಗೆ ಎರಡು ತಿಂಗಳ ಪೂರ್ಣ ವಿರಾಮ, ಹೊಸ ಹಳ್ಳಿ ಆಟಗಳ ಸಾಂಗತ್ಯ.

ಇನ್ನೊಂದು ಲೇಖನದಲ್ಲಿ ನಾವಾಡುತ್ತಿದ್ದ ಹಳ್ಳಿ ಆಟಗಳ ಬಗ್ಗೆ ಬರೆಯುತ್ತೇನೆ.

ಆ ದಿನ ಅಂತೂ ಬಂದೆ ಬಿಟ್ಟಿತು. ನಮ್ಮ ಮನಸುಗಳು ಊರಿಗೆ ಹೋಗಲು ತಯಾರಾಗಿವೆ.  ತಿಂಡಿ ತಿಂದು ಬೆಳಿಗ್ಗೆ ೯ ಗಂಟೆಗೆ ನಮ್ಮ ಊರಿನಿಂದ ಧರ್ಮಸ್ಥಳಕ್ಕೆ ಪ್ರಯಾಣ. ಬಸ್ ಕಿಕ್ಕಿರಿದು ತುಂಬಿರುತ್ತಿತ್ತು. ಸೀಟ್ ಸಿಕ್ಕರೆ ನಮ್ಮ ಪುಣ್ಯವೇ ಸರಿ. ಸರಿ ಸುಮಾರು ಎರಡೂವರೆ ಗಂಟೆಯ ಪಯಣ ಧರ್ಮಸ್ಥಳಕ್ಕೆ. ಮುಟ್ಟುವಾಗ ಹನ್ನೊಂದುವರೆ. ದೇವರ ದರ್ಶನ ಮಾಡಿ, ಭೋಜನ ಪ್ರಸಾದ ಸ್ವೀಕರಿಸಿ, ಮತ್ತೆ ಬಸ್ ನಿಲ್ದಾಣಕ್ಕೆ ಬರೋವಾಗ ಒಂದು ಗಂಟೆ.  ನಮ್ಮ ಬಸ್ ಪಯಣ ಮತ್ತೆ ಎರಡು ಗಂಟೆಗೆ ಆರಂಭ.

ಮೊದ ಮೊದಲು ಧರ್ಮಸ್ಥಳದಿಂದ ಇದ್ದ ಒಂದೇ ಒಂದು ಬಸ್ ಎಂದರೆ ಗುಲ್ಬರ್ಗಕ್ಕೆ.(ನಂತರ ಸರಿ ಸುಮಾರು ಹನ್ನೆರಡು ವರುಷದ ನಂತರ ಇನ್ನೊಂದು ಬಸ್ ಬೀದರ್ ಗೆ.)

ಬಸ್ ಪಯಣ ಧರ್ಮಸ್ಥಳದಿಂದ ಗುಲ್ಬರ್ಗದ ಕಡೆಗೆ. ಬಸ್ ಆರಂಭವಾದೊಡನೆ ನಾವು ಮೂರು ಅಣ್ಣ ತಮ್ಮಂದಿರು ಕಿಟಕಿಯ ಕಡೆಗೆ ಕೂಡೋದು ಯಾರು ಅನ್ನೋ ಚರ್ಚೆ ಆರಂಭಿಸುತ್ತಿದ್ದೆವು. ಕೊನೆಗೆ ಒಬ್ಬೊಬ್ಬರು ಎರಡು ಗಂಟೆ ಅಥವಾ ಮೂರು ಗಂಟೆ  ಯ ಸರತಿಯಂತೆ ಕೂಡೋದು ಅಂತ ನಿರ್ಧಾರವಾಗುತ್ತಿತ್ತು. ಮೊದ ಮೊದಲು ಮೂರು ಸೀಟಿನಲ್ಲಿ ಐದು ಜನ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದೆವು. ನಮಗೆ ಪೂರ್ಣ ಟಿಕೆಟ್ ಆರಂಭವಾದ ಮೇಲೆಒಬ್ಬೊಬ್ಬರಿಗೆ ಅವರದೇ ಆದ ಸೀಟ್ ಪಯಣದ ಭಾಗ್ಯ.

ಧರ್ಮಸ್ಥಳ - ಉಜಿರೆ ಮಾರ್ಗವಾಗಿ ಚಾರ್ಮಾಡಿ ಘಾಟಿಯ ಪಯಣ. ಆಗ ಚಾರ್ಮಾಡಿ ಪಯಣ ತುಂಬಾ ಕ್ಲಿಷ್ಟ.  ಆ ಕಿಕ್ಕಿರಿದಾದ ದಾರಿಗಳು, ಎದುರಿಗೆ ವಾಹನಗಳು ಬಂದರೆ ದಾರಿ ಕೊಡೋದಕ್ಕೆ ಡ್ರೈವರ್ ಪಡೋ ಕಷ್ಟಗಳು, ಒಂದು ಕಡೆ ಕಡಿದಾದ ಕಲ್ಲುಗುಡ್ಡಗಳು , ಇನ್ನೊಂದೆಡೆ ಆಳವಾದ ಪ್ರಪಾತ, ಯಾವುದೇ ತಡೆಗೋಡೆ ಇಲ್ಲದ ದಾರಿ, ಹಿಮ್ಮುಖ ತಿರುವುಗಳು. ನಮ್ಮ ಊರಿಗೆ ಹೋಗಲು ಈ ಘಟ್ಟ ಏರಿಯೇ ಹೋಗಬೇಕಾದ್ದರಿಂದ ನಮ್ಮನ್ನು "ಘಟ್ಟದ" ಜನರು ಅಂತ ಕರೆಯುತ್ತಿದ್ದರು ಅಂತ ತಿಳಿಯುತ್ತಿದ್ದೆ.  ಚಾರ್ಮಾಡಿ ಘಾಟಿ ಮುಗಿಯುವಾಗ ಒಂದು ಅಣ್ಣಪ್ಪನ ದೇವಸ್ಥಾನ ಬರುತ್ತದೆ. ಅಲ್ಲಿ ಎಲ್ಲಾ ಜನರಿಗೆ ಉಚಿತ ತಂಪಾದ ನೀರಿನ ವ್ಯವಸ್ಥೆ ಇದೆ. ಆ ದೇವರ ಬಳಿ  ಬೆಟ್ಟ ಏರೋವ್ವಗ ಮತ್ತೆ ಇಳಿವಾಗ ನಮ್ಮ ಪ್ರಯಾಣ ಸುಖಕರವಾಗಲಿ ಅಂತ ಕೇಳಿಕೊಳ್ಳೋ ಪರಿಪಾಠ ಬೆಳೆದು ಬಂದಿದೆ.

ಘಾಟಿ ಮುಗಿದ ಬಳಿಕ ಬರೋ ಊರೇ "ಕೊಟ್ಟಿಗೆಹಾರ". ಅಲ್ಲಿ ಚಹಾ ತಿಂಡಿಗೆ ನಿಲ್ಲಿಸುತ್ತಿದ್ದರು. ಅಲ್ಲಿಂದ ಮಲೆನಾಡ ಪಯಣ ಆರಂಭ. ಎಲ್ಲಿ ನೋಡಿದರಲ್ಲಿ ತೆಂಗು ಅಡಿಕೆಗಳ ನಂತರ ಮೂಡಿಗೆರೆ ನಂತರ ಚಿಕ್ಕಮಗಳೂರು. ಚಿಕ್ಕಮಗಳೂರು ಕಾಫಿಗೆ ತುಂಬಾ ಹೆಸರುವಾಸಿ. ಭಾರತದಲ್ಲಿ ಕಾಫಿ ಬೆಳೆದ ಮೊದಲ ಊರೇ ಚಿಕ್ಕಮಗಳೂರು.  ನಮ್ಮ ಪಠ್ಯದಲ್ಲಿ ಬರುವ ವಿಷಯ ನೆನಪಿಗೆ ಬರುತಿತ್ತು. ಕಾಫಿ ಗಿಡಗಳ ದರ್ಶನವೂ ಆಗುತಿತ್ತು.

ಕಡೂರು-ಬೀರೂರು- ತರೀಕೆರೆ-ಭದ್ರಾವತಿ- ಶಿವಮೊಗ್ಗ. ಶಿವಮೊಗ್ಗ ತಲುಪವಾಗ ರಾತ್ರಿ ಎಂಟು ಗಂಟೆ. ಭದ್ರಾವತಿಯ ಉಕ್ಕಿನ ಕಾರ್ಖಾನೆ, ಭದ್ರಾ ನದಿಯ ದರ್ಶನ ಒಂದು ಹೊಸ ಅನುಭವ ನೀಡುತ್ತದೆ.  ರಾತ್ರಿಯಾದಂತೆ ಹೊರಗೆ ಕತ್ತಲು, ಊರು ಬಂದರೆ ಮಾತ್ರ ಬೆಳಕು. ಸಣ್ಣ ಸಣ್ಣ ಊರುಗಳ ಹೆಸರು ನೋಡಿ ನಕ್ಕಿದ್ದೋ ಉಂಟು. ನಾವು ಸಮಯ ಕಳೆಯಲು ಅಂತ್ಯಾಕ್ಷರಿ, ಊರುಗಳ ಹೆಸರು ಹೇಳೋದು ಇಂತ ಆತ ಆಡುತ್ತಿದ್ದೆವು. ಬಸ್ ತುಂಬಾ ತರ ತರದ ಜನರು. ಅವರ ಮಾತು ಕೇಳೋದು ಒಂದು ಬೇರೆಯದೇ ಖುಷಿ ನೀಡುತ್ತದೆ. ಅವರ ಜೀವನದ ಕಥೆಗಳು, ಅನುಭವಗಳು ಕೇಳಲು ತುಂಬಾ ಚಂದ.

ಆಮೇಲೆ ನಾವು ಬಸ್ ಏರಿದೊಡನೆ ಬಸ್ ನಂಬರ್ ಚೀಟಿಯಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದೆವು. ಏನಾದರೂ ನಮಗೆ ಬಸ್ ತಪ್ಪಿದರೂ ಬಸ್ ನಂಬರ್ ನೆನಪಿರಬೇಕು ಅನ್ನೋ ಅಭ್ಯಾಸವನ್ನು  ನಮ್ಮ ತಂದೆಯವರು ಕಲಿಸಿದ್ದರು. ಹಾಗಾಗಿ ಜೀವನದಲ್ಲಿ  ಇಲ್ಲಿ ವರೆಗೂ ಬಸ್ ತಪ್ಪಿದ ಅಥವಾ ಬೇರೆ ಬಸ್ ಏರಿದ ಸಂದರ್ಭ ಬಂದಿಲ್ಲ.

ಶಿವಮೊಗ್ಗದಲ್ಲಿ ಸಾಮಾನ್ಯವಾಗಿ ಹತ್ತು ನಿಮಿಷದ ವಿರಾಮ. ನಂತರ ಬಿಟ್ಟ ಬಸ್ ಪಯಣ ಹರಿಹರ-ಹರಪನಹಳ್ಳಿಗೆ. ಹರಪನಹಳ್ಳಿ ರಾತ್ರಿ ಊಟಕ್ಕೆ ನಿಲ್ಲಿಸೋ ಜಾಗ. ಖಾನಾವಳಿಯಲ್ಲಿ ಎಷ್ಟೋ ವರುಷ ನಾವು ಜೋಳದ ರೊಟ್ಟಿ ಊಟ ಮಾಡಿದ್ದೇವೆ. ಆದರೆ ಕಾಲ ಕಳೆದಂತೆ , ಜನರ ಕೋರಿಕೆಗಳು ಬದಲಾದಂತೆ , ಡ್ರೈವರ್ ಅನುಕೂಲಕ್ಕೆ ತಕ್ಕಂತೆ ಯಾವುದೊ ಢಾಬಾ ಹತ್ತಿರ ನಿಲ್ಲಿಸುತ್ತಿದ್ದರು. ಢಾಬಾ ಹೆಚ್ಚಾಗಿ ಮಿಶ್ರಾಹಾರಿ ಇರುತ್ತಿತ್ತು. ಆಗ ನಮಗೆ ರಾತ್ರಿ ಊಟ ಅಂದರೆ ಚಹಾ ಮತ್ತು ಬ್ರೆಡ್(ಅಥವಾ ಬಿಸ್ಕತ್).  ಊಟದ ನಂತರ ಬಸ್ ಬಿಟ್ಟ ಮೇಲೆ,

ದೀಪ ಆರಿದ ಮೇಲೆ ನಮ್ಮ ಸಣ್ಣ ನಿದ್ದೆ ಆರಂಭ.  ಮೊದಮೊದಲು ಸೀಟ್ ಕೆಳಗಡೆ ಸಣ್ಣ  ಬೆಡ್ ಶೀಟ್ ಹಾಸಿ ಮಲಗುತ್ತಿದ್ದೆವು. ಈಗಿನ ಮಕ್ಕಳಿಗೆ ಏನಾದರೂ ಆ ರೀತಿ ಮಲಗಲು ಹೇಳಿದರೆ ಖಂಡಿತಾ ಮಲಗುವುದೇ  ಇಲ್ಲ.ಕೆಳಗಡೆ  ಸರತಿ ಸಾಲಿನಂತೆ ಎರಡೆರಡು ಗಂಟೆ ಮಲಗುತ್ತಿದ್ದೆವು. ಉಳಿದ ಸಮಯ ಸೀಟಿನ ಮೇಲೆ, ಅಪ್ಪ ಅಮ್ಮನ ಹೆಗಲಿಗೆ ಒರಗಿ ಮಲಗೋ ಸುಖ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ೧೨ ಗಂಟೆಗೆ ಹೊಸಪೇಟೆ ತಲುಪುತಿತ್ತು. ಪ್ರತಿಸಲ ಹೊಸಪೇಟೆ ತಲುಪಿದಾಗ ಅಲ್ಲಿಂದ ಹಂಪಿ ತುಂಬಾ ಹತ್ತಿರ , ಒಮ್ಮೆ ನೋಡಬೇಕು ಅನ್ನೋ ಬಯಕೆ ಇರುತಿತ್ತು. ಯಾಕೆ ಎಂದರೆ ನಮ್ಮ ಬಸ್ ಹಂಪಿಗೆ ಕೇವಲ ಹತ್ತು ಕಿಲೋ ಮೀಟರ್ ಹತ್ತಿರ ಇರುವಾಗ ಬೇರೆ ಮಾರ್ಗ ಹಿಡಿಯುತಿತ್ತು. ಈ ಬಯಕೆ ಕೆಲವು ವರ್ಷಗಳ ಹಿಂದೆ ತೀರಿತು.

ಗಂಗಾವತಿ-ಸಿಂಧನೂರ್-ಮಸ್ಕಿ- ಲಿಂಗಸಗೂರು ಮಾರ್ಗವಾಗಿ ಸುರಪುರ ತಲುಪುವಾಗ ಬೆಳಿಗ್ಗೆ ೬ ಅಥವಾ ೭ ಗಂಟೆ. ಆಗ ಮಾರ್ಗ ತುಂಬಾ ಕೆಟ್ಟದಾಗಿರುತಿತ್ತು. ಆ ಕೆಟ್ಟ ದಾರಿಗಳಲ್ಲಿ ಬಸ್ ಅಡ್ಡಾಡುತ್ತ, ಓಲಾಡುತ್ತಾ ಚಲಿಸುವಾಗ ನಮಗೆ ಜೋಗುಳ ಹಾಡಿ ಉಯ್ಯಾಲೆಯಲ್ಲಿ ತೂಗಿದಂತೆ ಅನುಭವವಾಗುತಿತ್ತು. ಬೆಳಿಗ್ಗೆ ಸುರಪುರದಲ್ಲಿ ಮುಖ ತೊಳೆದು,ಉಪಹಾರ ಸೇವನೆ. ಹೊಟ್ಟೆ ಚುರುಗುಟ್ಟಿ, ಯಾವಾಗ ತಿಂಡಿ ತಿನ್ನುತ್ತೇವೋ ಅನಿಸುತಿತ್ತು. ಸುರಪುರ ಊರು  ಮತ್ತು ಕಾಣಸಿಗುವ ಕೋಟೆ ನಮಗೆ ರಾಜ ವೆಂಕಟಪ್ಪ ನಾಯಕನ ಅಸಾಧಾರಣವಾದ ಧೈರ್ಯ, ಬ್ರಿಟಿಷರಿಗೆ ತಲೆ ಬಾಗದೆ , ಸಂಕೋಲೆ ಇದ್ದರೂ ತನ್ನನ್ನು ತಾನೇ ಬಂದೂಕಿನಿಂದ ಹೊಡೆದುಕೊಂಡು ಬ್ರಿಟಿಷರ ಕೈಸೆರೆಯಾಗದೆ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಅಪ್ರತಿಮ ಕಥೆ  ನೆನಪಿಗೆ ಬಂದು ಕಣ್ಣೀರು ತನ್ನಿಂದ ತಾನಾಗಿಯೇ ಬರುತಿತ್ತು. 

ಅಲ್ಲಿಂದ ಬಸ್ ಹೊರಟ  ಮೇಲೆ, ನಮ್ಮ ಊರಿನ ಹತ್ತಿರ ಬರುತ್ತಿದ್ದೇವೆ ಅನ್ನೋ ಲವಲವಿಕೆ, ಉತ್ತರ ಕರ್ನಾಟಕದಲ್ಲಿ ಇದ್ದೇವೆ ಅನ್ನೋ ಹೆಮ್ಮೆ ರೋಮಾಂಚನ ತರುವಂತೆ ಮಾಡುತಿತ್ತು. ಬಸ್ ಶಹಾಪುರ, ಜೇವರ್ಗಿ ಮಾರ್ಗವಾಗಿ ಕಲ್ಬುರ್ಗಿ (ಗುಲ್ಬರ್ಗ) ತಲುಪುತ್ತಿದ್ದಂತೆ ಒಣ ಹವೆ , ಆ ಕಡು ಬೇಸಿಗೆಯ ಬಿಸಿಲು ನಮ್ಮನ್ನು ಸ್ವಾಗತಿಸುತ್ತಿತ್ತು. ಎಲ್ಲಿ ನೋಡಿದರಲ್ಲಿ ಬರಿಯ ಕಪ್ಪು ಹೊಲಗಳು , ಮುಳ್ಳು ಗಿಡಗಳು , ಅಲ್ಲಲ್ಲಿ ಮಾವಿನ ಗಿಡಗಳು. ಜೊತೆಗೆ ಭೀಮಾ , ಕೃಷ್ಣಾ ನದಿಗಳ ದರ್ಶನ. ಗುಲ್ಬರ್ಗ ಮುಟ್ಟುವಾಗ ಒಂಬತ್ತು ಅಥವಾ ಹತ್ತು ಗಂಟೆಯಾಗುತ್ತಿತ್ತು.

ಅಂತೂ ನಮ್ಮ ಇಪ್ಪತ್ತು ಗಂಟೆಗಳ ಒಂದೇ ಬಸ್ ನಲ್ಲಿಯ ಸುಧೀರ್ಘ ಪಯಣ ಒಂದು ಹಂತ ತಲುಪುತಿತ್ತು. ಅಲ್ಲಿಂದ ಮುಂದಿನ ಹಂತದ ಪಯಣ ಆರಂಭ.

ಗುಲ್ಬರ್ಗದಿಂದ ನಮ್ಮ ಊರು ಆಗ ಎರಡೂವರೆ ಗಂಟೆ ಪಯಣ(ಈಗ ಒಂದು ಗಂಟೆ ಹದಿನೈದು ನಿಮಿಷ ಸಾಕು). ಹುಮನಾಬಾದ್ ಮಾರ್ಗವಾಗಿ ಹಳ್ಳಿಖೇಡ ಬಂದು ತಲುಪುವಾಗ ಮಧ್ಯಾಹ್ನ ಹನ್ನೆರಡೂವರೆ. ಮೇಲೆ ಬಿರು ಬಿಸಿಲು, ದೀರ್ಘ ಪಯಣದ ಸುಸ್ತು ಇದ್ದರೂ ನಮ್ಮ ಊರು ತಲುಪಿದ್ದೇವೆ ಅನ್ನೋ ಖುಷಿಯಲ್ಲಿ ಅದೆಲ್ಲವೂ ಮರೆತು ಹೋಗುತಿತ್ತು. ಬಸ್ ಸ್ಟಾಂಡ್ ನಿಂದ ನಡೆದು ಮನೆಗೆ ತಲುಪಿದಂತೆ ನಮ್ಮ ಕೆಂಪು ಡಬ್ಬಿಯ ಪಯಣ ಮುಗಿಯುತ್ತಿತ್ತು. ಒಂದು ದಿನ ಇನ್ನೂ ನಾವು ಬಸ್ನಲ್ಲಿ ಕುಳಿತಂತೆ , ಬಸ್ ಓಲಾಡಿದಂತೆ, ಬಸ್ ಶಬ್ದ ನಮ್ಮ ಕಿವಿಯಲ್ಲಿ ಗುನುಗುನಿಸುತಿತ್ತು.

ಮುಂದಿನ ಲೇಖನದಲ್ಲಿ ಕೆಂಪು ಡಬ್ಬಿಯ ಪಯಣದ ಇನ್ನೊಂದು ಮುಖದ ಬಗ್ಗೆ ಬರೆಯುತ್ತೇನೆ. ಅದೇ ನಮ್ಮ ಶಾಲಾ ಬಸ್ ಪಯಣ. ಆ ಮಳೆಗಾಲದ ಕೆಟ್ಟ ಪಯಣ, ಕೆಲವೊಂದು ಮರೆಯಲಾರದ ಅನುಭವಗಳ (ಬಸ್ ಆಕ್ಸಿಡೆಂಟ್ , ಪಾಸ್ ಇಲ್ಲದೆ ಮಾಡಿದ ಪಯಣ) ಬಗ್ಗೆ ಬರೆಯುತ್ತೇನೆ. ಮುಂದಿನ ಲೇಖನದ ತನಕ ಬರವಣಿಗೆಗೆ ಒಂದು ಅಲ್ಪವಿರಾಮ.
 
- ದಿಲೀಪ್ ದೀಕ್ಷಿತ್

Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ