ಗಣೇಶ ಚತುರ್ಥಿಯ ನೆನಪುಗಳು

ಗಣೇಶ ಚತುರ್ಥಿಯ ನೆನಪುಗಳು

ಹಬ್ಬ ಹಿಂದೂ ಸಂಸ್ಕೃತಿಯ ಒಂದು ಅಂಗ. ಭಾರತದಲ್ಲಿ ಆಚರಿಸುವಷ್ಟು ಹಬ್ಬಗಳು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಪ್ರತಿಯೊಂದು ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ ಇದೆ. ಅದರ ಹಿಂದೆ ಒಂದು ಪೌರಾಣಿಕ ಕಥೆ ಇದ್ದೇ ಇದೆ. ಈಗಷ್ಟೇ ಗಣಪತಿಯ ಹಬ್ಬ ಮುಗಿಯಿತು . ಬೆಂಗಳೂರಲ್ಲಿ ಇನ್ನೂ ಹಬ್ಬ ನಡೆದಿದೆ. ಪ್ರತಿ ಓಣಿಯಲ್ಲಿ ಗಣೇಶನ ಪೂಜೆ ನಡೆಯುತ್ತಿದೆ. ಇನ್ನೂ ಒಂದು ತಿಂಗಳು ನಡೆಯುತ್ತದೆ. ಇದನ್ನು ನೋಡಿ ನನಗೆ ನಮ್ಮ ಬಾಲ್ಯದಲ್ಲಿ ಆಚರಿಸುತ್ತಿದ್ದ ಗಣಪತಿ ಹಬ್ಬದ ನೆನಪಾಯಿತು.

ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಆಸೆಯಾಗಿ ಈ ಕೆಳಗಿನ ಕೆಲವು ಸಂಗತಿಗಳನ್ನು ಬರೆದಿದ್ದೇನೆ.

ಎಲ್ಲ ಹಬ್ಬಗಳ ನಡುವೆ ಗಣೇಶ ಹಬ್ಬ ವಿಶೇಷವಾದ ಹಬ್ಬ. ಗಣೇಶ್ ಚತುರ್ಥಿ  ಹಲವು ಕಡೆ ಬೇರೆ ಬೇರೆ ಹೆಸರಿಂದ ಆಚರಿಸಿಲ್ಪಡುವುದು. ಇದು ಕರಾವಳಿ ಕಡೆಯಲ್ಲಿ "ಚೌತಿ" ಎಂದೇ ಪ್ರಸಿದ್ದಿ.

ನಾವಿದ್ದ ಒಂದು ಸಣ್ಣ ಊರಿನಲ್ಲಿ ಒಂದು ದೊಡ್ಡ ಹಬ್ಬದಂತೆ ಆಚರಿಸಲ್ಪಡುತಿದ್ದ ಎಕ್ಕೆಕ ಹಬ್ಬ ಇದು. ಮೊದ ಮೊದಲು ಒಂದೇ ಮನೆಯಲ್ಲಿ ನಮಗೆ ಹಬ್ಬದ ಊಟಕ್ಕೆ ಹೇಳುತ್ತಿದ್ದರು. ವರ್ಷ ಕಳೆದಂತೆ ಜನರ ಜೊತೆ ಸ್ನೇಹ ಹೆಚ್ಚಾದಂತೆ ದೀಕ್ಷಿತರ ಮನೆಗೆ (ನಮ್ಮ ಮನೆಗೆ) ೩ ರಿಂದ ೪ ಆಮಂತ್ರಣ ಬರಲು ಆರಂಭಿಸಿತು.  ಅಲ್ಲಿ ಎರಡೂ ದಿನ (ಪ್ರತಿಷ್ಠಾಪನೆ ಮತ್ತು ವಿಸರ್ಜನೆ )ನಮಗೆ ಹಬ್ಬದ ಜೊತೆಗೆ ಊಟಕ್ಕೆ ಹೇಳುತ್ತಿದ್ದರು . ಮೊದಲನೇ ದಿನ ಗಣಪತಿ ಪ್ರತಿಷ್ಠಾಪನೆ ಮತ್ತು ನಂತರದ ದಿನ ವಿಸರ್ಜನೆ. ಹೇಳಿದ ಮನೆಗೆ ಹೋಗದಿದ್ದರೆ ತುಂಬಾ ಬೇಜಾರು ಪಡುತ್ತಿದ್ದರು . ಹಾಗಾಗಿ ನಾವು ಕೂಡ ನಮ್ಮ ನಡುವೆ ಮನೆಗಳನನ್ನು ಹಂಚಿ ಕೊಳ್ಳುತ್ತಿದೆವು.ಕೆಲವು ಮನೆಗಳು ಎರಡು ಕಿಲೋಮೀಟರು ದೂರ.. ಕಾಡಿನ ನಡುವೆ ಪ್ರಯಾಣ.

ಮುಖ್ಯವಾಗಿ ಮೂರು ಮನೆಗಳು. ಮಾರ್ಗದ ಮನೆ(ಶಶಾಂಕಣ್ಣನ  ಮನೆ), ಶ್ರೀ ಸುಬ್ರಾಯ ಹೆಬ್ಬಾರರ ಮನೆ  ಮತ್ತು  ಮನೆ ಮಾಲೀಕರಾದ ಶ್ರೀ ರಘುನಾಥ ಹೆಬ್ಬಾರರ ಮನೆ. ಮೊದಲನೇ ದಿನ ತಂದೆಯವರು ಸುಬ್ರಾಯ ಹೆಬ್ಬಾರರ ಮನೆಗೆ(ಊರು ಬಿಡುವ ತನಕವೂ ಅವರು ಈ ಮನೆ ತಪ್ಪಿಸಲಿಲ್ಲ) , ಅಮ್ಮ ಮನೆ ಮಾಲಿಕರ ಮನೆಗೆ ಮತ್ತು ನಾವು ಮೂರು ಅಣ್ಣ ತಮ್ಮಂದಿರು ಮಾರ್ಗದ ಮನೆಗೆ.  ಅದಕ್ಕೆ ಕಾರಣ ಮಾರ್ಗದ ಮನೆಯ ಶಶಾಂಕಣ್ಣ ನಮ್ಮ ಕ್ರಿಕೆಟ್ ಗೆಳೆಯರೂ ಹೌದು.  ನಾವು ಕ್ರಿಕೆಟ್ ನೋಡಲು ಹೋಗುತ್ತಿದ್ದ ಮನೆ ಕೂಡ. ಎರಡನೇ ದಿನ ನಮಗೆ ಶಾಲೆ ಇರೋವಾಗ (ಏಳನೇ ತರಗತಿ ತನಕ), ಅಧ್ಯಾಪಕರ ಅನುಮತಿ ತಗೊಂಡು ಊಟಕ್ಕೆ ಹೋಗುತ್ತಿದ್ದೆವು.  ಎಂಟನೇ ತರಗತಿಯ ನಂತರ ಬೇರೆ ಊರಿಗೆ ಶಾಲೆ ಕಲಿಯಲು ಹೋಗುವುದರಿಂದ , ಅಮ್ಮ ಒಬ್ಬಳೇ ಊಟಕ್ಕೆ ಹೋಗುತ್ತಿದ್ದಳು.

ಮನೆಯಲ್ಲಿ ಪೂಜೆ ಮುಗಿಸಿಕೊಂಡು ಹನ್ನೊಂದುವರೆಗೆ ಕರೆದವರ ಮನೆ ತಲುಪುತ್ತಿದ್ದೆವು. ಅವರ ಮನೆಯಲ್ಲಿ ಗಣಪತಿಯನ್ನು ಅವರೇ ತಯಾರಿಸುತ್ತಿದ್ದರು. ಆ ಚಂದ ನೋಡಲು ಎರಡೂ ಕಣ್ಣು ಸಾಲದು. ಒಂದು ಸಣ್ಣ ಮಂಟಪ , ಸುತ್ತಲೂ ಅದೆಂಥ ಅಲಂಕಾರ. ಅದರ ಕೆಲವು ಚಿತ್ರಗಳನ್ನೂ ಹಂಚಿ ಕೊಂಡಿದ್ದೇನೆ.  ಆ ಚಿತ್ರ ತೆಗೆದವರಿಗೆ ನನ್ನ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.

ಪೂಜೆ ಮುಗಿಯುವಾಗ ಹನ್ನೆರಡೂವರೆ. ಹತ್ತರಿಂದ ಹನ್ನೆರಡು ವಿವಿಧ ರೀತಿಯ ಆರತಿಗಳಿಂದ ಗಣೇಶ ದೇವರನ್ನು ಪೂಜಿಸುವಾಗ ಬಾರಿಸುವ ಗಂಟೆ , ಜಾಗಟೆ , ತಾಳ , ಶಂಖ ವಾದ್ಯ ಕೇಳೋದೇ ಒಂದು ವಿಶೇಷ ಅನುಭವ. ಮನಸ್ಸು ದೇವರಲ್ಲಿ ತನ್ನಿಂದ ತಾನಾಗಿಯೇ ಮಗ್ನವಾಗುತಿತ್ತು. ರೋಮಾಂಚನದ ಆ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. ಆ ಶಬ್ದ ಇಂದಿಗೂ ಕಿವಿಗಳಲ್ಲಿ ಅನುರಣಿಸುತ್ತದೆ.

ಆರತಿ ಮುಗಿದ ಮೇಲೆ, ಪ್ರತಿಯೊಬ್ಬರಿಗೂ ದೇವರಿಗೆ ಹೂವು ಗರಿಕೆ ಏರಿಸಲು ಕರೆಯುತ್ತಿದ್ದರು. ನಮಗೂ ಆ ದೇವರ ಸನಿಹಕ್ಕೆ  ಹೋಗಿ ಪೂಜಿಸುವ ಅವಕಾಶ ಜೀವನದ ಒಂದು ಸುವರ್ಣ ಸಮಯವೇ ಸರಿ.

ಇದರ ನಂತರ ಊಟಕ್ಕೆ ಬಾಳೆಎಲೆ ಹಾಕಿ ನಮ್ಮನ್ನು ಊಟಕ್ಕೆ ಆಮಂತ್ರಿಸುತ್ತಿದ್ದರು. ಮೊದಲು ವಿವಿಧ ಪಲ್ಯಗಳು , ಕೋಸಂಬರಿಗಳು, ಚಟ್ನಿ , ಹಪ್ಪಳ , ಉಪ್ಪಿನಕಾಯಿ , ಪಾಯಸ , ಮಜ್ಜಿಗೆ ಹುಳಿ , ಮೆಣಸುಕಾಯಿ , ಅನ್ನ , ತೊವ್ವೆ ಬಡಿಸುತ್ತಿದ್ದರು. ಊಟ ಬಾಳೆ ಎಲೆ ತುಂಬಾ ಹರಡಿ ಇನ್ನೇನೂ ಜಾಗವೇ ಇಲ್ಲ ಎನ್ನಿಸುವಷ್ಟು ಇರುತಿತ್ತು. ಒಮ್ಮೆ ಎಲ್ಲವೂ ಬಡಿಸಿದ ಮೇಲೆ, ಅನ್ನದ ಮೇಲೆ ತುಪ್ಪ ಬೀಳುತಿತ್ತು. ಇನ್ನೊಂದು ವಿಶೇಷ ಎಂದರೆ ಮನೆಯ ಯಜಮಾನತಿ ಕಚ್ಚೆ ಹಾಕಿಕೊಂಡು ತುಪ್ಪ ಬಡಿಸಬೇಕಿತ್ತು.

ಊಟದ ಮೊದಲ ಮಂತ್ರಗಳು ಮುಗಿದ ಮೇಲೆ, ಪ್ರೋಕ್ಷಣೆ , ಪ್ರಾಣಾಹುತಿ ನಂತರ ಊಟ ಪ್ರಾರಂಭ.  ಪಾಯಸದಿಂದ ಆರಂಭವಾದ ಊಟ ಅನ್ನ , ಸಾರು, ಹುಳಿ ನಂತರ ವಿಧ ವಿಧದ ಸಿಹಿ ತಿನಿಸುಗಳು. ಹೋಳಿಗೆ, ಜಿಲೇಬಿ , ಮೋದಕ , ಪಾಯಸ ಎಂತಹವರ ಬಾಯಲ್ಲೂ ನೀರೂರಿಸುತಿದ್ದವು. ಹೋಳಿಗೆ ಇದ್ದರಂತೂ ಹತ್ತು, ಹನ್ನೆರಡು ತಿನ್ನುವವರನ್ನೂ  ಕಂಡಿದ್ದೇನೆ. ಹೊಟ್ಟೆ ತುಂಬಿದರೂ ಇನ್ನೂ ಒತ್ತಾಯ ಮಾಡಿ ಹಾಕುತ್ತಿದ್ದರು.  ಆ ಪ್ರೇಮದಿಂದ ಹಾಕಿದಕ್ಕೆ ಮತ್ತೆರಡು ಸಿಹಿ ತಿನಿಸುಗಳು ಹೆಚ್ಚಾಗಿಯೇ ಹೊಟ್ಟೆ ಸೇರುತಿತ್ತು. ಊಟದ ನಡುವೆ ಸಣ್ಣ ಮಕ್ಕಳ ನಡುವೆ "ಶ್ಲೋಕ ಹೇಳುವ" ಸ್ಪರ್ಧೆ ಏರ್ಪಡುತ್ತಿತ್ತು,  ಕೊನೆಯಲ್ಲಿ ಮೊಸರನ್ನ, ಉಪ್ಪಿನಕಾಯಿ ಆ ಊಟಕ್ಕೆ ಶುಭಕರವಾದ ಅಂತ್ಯ ಕೊಡುತಿತ್ತು.  ಒಟ್ಟಾರೆ ಊಟ ಒಂದರಿಂದ ಒಂದೂವರೆ ಗಂಟೆ ಇರುತಿತ್ತು ಎಂದರೆ ಎಲ್ಲರೂ ಹೇಳುವ "ಬ್ರಾಹ್ಮಣ ಭೋಜನ ಪ್ರಿಯ" ನಿಜವೇ ಅನಿಸುತಿತ್ತು.

ಊಟದ ನಂತರ ಸುಣ್ಣ ವೀಳ್ಯದ ಎಲೆ ಅಡಿಕೆ ಹಾಕಿಕೊಂಡು ಹಾಗೇನೇ ಲೋಕಾಭಿರಾಮವಾಗಿ ಮಾತನಾಡಿ , ಚಹಾ ಕುಡಿದು ಮನೆಗೆ ನಮ್ಮ ಪಯಣ. ಅಂದು ರಾತ್ರಿ ಶಾಸ್ತ್ರಕ್ಕೆ ಮೊಸರನ್ನ ಉಂಡರೆ ಹಬ್ಬ ಮುಗಿದಂತೆ ಸರಿ. ಮರುದಿನ ಗಣಪತಿ ವಿಸರ್ಜನೆ. ಎರಡೆರಡು ಕಿಲೋಮೀಟರು ಗಣಪತಿಯನ್ನು ಎರಡೂ ಕೈಯಲ್ಲಿ ಎತ್ತಿಕೊಂಡು(ಹೆಣ್ಣು ಮಕ್ಕಳೂ ಕೂಡ) ಬರೋದು ನೋಡೋದು ತುಂಬಾ ಚಂದ. ಮನೆಯ ಹತ್ತಿರದ ನದಿಯಲ್ಲಿ ಗಣಪತಿಯನ್ನು ಕಳಿಸಿ , ಅವತ್ತೂ ಮೊದಲನೇ ದಿನದ ಹಾಗೆ ಊಟ ಮುಗಿಸಿದರೆ ಆ ವರ್ಷದ ಊರ ಗಣೇಶ ಹಬ್ಬ ಮುಗಿದಂತೆ.

ಮರುದಿನ ನಮ್ಮ ಊರಿನಿಂದ ಮೂರು ಕಿಲೋಮೀಟರು ದೂರದಲ್ಲಿ ಇದ್ದ "ಕಡಬ" ದಿಂದ ಗಣೇಶ ನಮ್ಮ ಊರಿನ ನದಿಗೆ ವಿಸರ್ಜನೆಗಾಗಿ ಬರುತ್ತಿದ್ದನು.. ಲಾರಿಯ ಮೇಲೆ ಕುಳಿತ ಗಣಪ , ಸುತ್ತ ವಿಧ ವಿಧದ ಅಲಂಕಾರ, ಟ್ಯಾಬ್ಲೋ ಪ್ರದರ್ಶನ , ಡೋಲು, ನಗಾರಿ ಜೊತೆಗೆ  ನಾಲ್ಕರಿಂದ ಐದು ಗಂಟೆ ಮೆರೆದು ನಮ್ಮ ಊರನ್ನು ತಲುಪುತ್ತಿದ್ದನು. ನಮ್ಮ ಮನೆಯ ಹತ್ತಿರದ ಗಣೇಶ ಮಂಟಪದಲ್ಲಿ ಪೂಜೆ. ಮಲ್ಯರ ಮನೆಯಲ್ಲಿ ವಿಧವಿಧದ  ಪಂಚಕಜ್ಜಾಯ , ಅವಲಕ್ಕಿ , ಶರಬತ್ತು ವ್ಯವಸ್ಥೆ ಇರುತಿತ್ತು.  ಪೂಜೆಯ ನಂತರ ನದಿಯಲ್ಲಿ ವಿಸರ್ಜನೆಯೊಂದಿಗೆ ಮುಂದಿನ ವರ್ಷ ಬೇಗ ಬಾ ಎಂದು ಬೀಳ್ಕೊಡುತಿದ್ದೆವು.

ಈ ತರಹದ ನೆನಪುಗಳು ಮನಸಿನ ಮೂಲೆಯಿಂದ ಪ್ರತಿವರ್ಷ ಎದ್ದು ಬಂದು ಮತ್ತೆ ಹಾಗೆ ತಮ್ಮ ಜಾಗ ಸೇರುತ್ತವೆ. ಗಣೇಶನ ದಯೆ ಸದಾ ನಮ್ಮ ಮೇಲಿರಲಿ ಎನ್ನುತ್ತಾ ಈ ನನ್ನ ಅನಿಸಿಕೆಗಳಿಗೆ ಪೂರ್ಣವಿರಾಮ ನೀಡುತ್ತೇನೆ.

-ದಿಲೀಪ್ ದೀಕ್ಷಿತ್

Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ