ಗಂಡ ಹೆಂಡತಿ ಬಂಧನ -  ಹಳೆ ಕಾಲ  ಮತ್ತು ಈಗಿನ ಕಾಲ

ನೋಟ್: ಇದು ನನ್ನ ಕಲ್ಪನೆಯ ಕವಿತೆ. ಯಾರ ಜೀವನಕ್ಕೆ ಸಂಬಂಧಿಸಿಲ್ಲ

ಹಳೆ ಕಾಲದಲ್ಲಿ:

ಆಗುತಿತ್ತು ಸಣ್ಣ ವಯಸ್ಸಿನಲ್ಲೇ ಮದುವೆ
ಅನಿಸ್ತುತಿತ್ತು ಏಕೆ ಬೇಕಿತ್ತು ಆ ಗೊಡವೆ
ಎಷ್ಟಾದರೂ ಅಪ್ಪ ನೋಡಿ ಮಾಡಿದ ಜೋಡಿ
ಹೇಳಿಕಳಿಸುತಿದ್ದರು ಸಂಭಾಳಿಸಿ  ಜೀವನ ಬಂಡಿ

ಗಂಡನೇ ದೇವರು ಎಂದು ಅಂದುಕೊಂಡಳು ಹೆಂಡತಿ
ಕುಟುಂಬ ನಡೆಯಿಸಿಕೊಂಡು  ಸಾಗಿದರು ಸತಿ-ಪತಿ
ಹೊಟ್ಟೆಗೆ ಕಮ್ಮಿ ಬಿದ್ದರೂ ಕೊರಗಲಿಲ್ಲ ದಿನಂಪ್ರತಿ
ಇದ್ದದರಲ್ಲೇ ಕಂಡರು ಜೀವನದಲ್ಲಿ ಸಂತೃಪ್ತಿ

ಗಂಡನ ಎದುರು ಮಾತಾಡುತ್ತಿರಲಿಲ್ಲ
ಅದು ಬೇಕು ಇದು ಬೇಕು ಎಂದು ಕೇಳುತ್ತಿರಲಿಲ್ಲ
ಆ ಊರು ಈ ಊರು ತಿರುಗುತ್ತಿರಲಿಲ್ಲ
ಗಂಡನ ಸಾಮಿಪ್ಯ ಬಿಟ್ಟು ಬೇರೇನೂ ಬೇಕಿರಲಿಲ್ಲ

ಅವಿಭಕ್ತ ಸಂಸಾರ ಸಾಗಿತು ವೇಗದಿ
ಕುಟುಂಬ ಬೆಳೆಯಿತು ಶರವೇಗದಿ
ಮನೆಯಾಗಿತ್ತು ನಂದ ಗೋಕುಲ
ಎಲ್ಲರ ನಗು ಕೇಳಿಸುತಿತ್ತು  ಕಿಲ ಕಿಲ

ಈಗಿನ ಕಾಲ :

ಮದುವೆಯ ಮುನ್ನ ಇರಬೇಕು ಮನೆ ಕಾರು
ಅದು ಇದ್ದರೇನೇ ಸಾಗುವುದು ಕಾರುಬಾರು
ಮದುವೆಯ ವಯಸ್ಸು ದಾಟಿದರು ಇಲ್ಲ ಚಿಂತೆ
ಜೋಡಿ ನಡೆಸಬೇಕು ಉದ್ಯೋಗದ ಸಂತೆ

ಪ್ರೇಮ ವಿವಾಹ ಸರ್ವೇ ಸಾಮಾನ್ಯ
ಕುಲ ಗೋತ್ರವು ಎಲ್ಲವೂ  ಮಾನ್ಯ
ಜೀವನ ಒಟ್ಟಿಗೆ ನಡೆಸಿದರೆ ಅದೇ ಧನ್ಯ

ಮನೆಯಲ್ಲಿ ಇದೆ ಟಿವಿ ಫ್ರಿಡ್ಜ್ ವಾಷಿಂಗ್ ಮಷೀನ್
ಸೆರೆಹಿಡಿದಿದೆ ಹೊಸ ತರದ ಫ್ಯಾಷನ್
ಊಟಕ್ಕೆ ಇಲ್ಲ ಯಾವುದೇ ನಿಯಂತ್ರಣ
ರೋಗಗಳಿಗೆ ಕೊಟ್ಟಿರುವೆವು ಆಮಂತ್ರಣ

ಒಂದೇ ಮನೆ ಆದರೆ ಮನವೆರಡು
ಮೊಬೈಲ್ ಇದ್ದರೆ ಬೇರೆಲ್ಲ ತಗಡು
ಪಾರ್ಟಿಯಲ್ಲಿ ಇಬ್ಬರೂ ತೇಲುತಿಹರು
ಪರರು ಇವರ ನೋಡಿ ನಗುತಿಹರು

ಗಂಡ ಹೆಂಡತಿ ಎಲ್ಲದರಲ್ಲಿ ಸಮಾನರು
ಆದರೂ ಏಕಿಷ್ಟು ದೂರ ದೂರ ಇರುವರು
ನಾ ಮೇಲು ನೀ ಮೇಲು ಅನ್ನೋ ಮನದವರು
ಜೀವನ ಸರಿಯಾಗಿ ನಡೆಸದೆ ದೂರುತ್ತಿರುವರು

ಇರಲಿ ಇಬ್ಬರ ನಡುವೆ ಪ್ರೀತಿ ನಿರಂತರ
ತಾರದಿರಲಿ ಇಬ್ಬರ ನಡುವೆ ಯಾವುದೇ ಅಂತರ
ಇಬ್ಬರು ಅನುಸರಿಸಬೇಕು ಜೀವನ ಸೂತ್ರ
ಆಗಲೇ ನಮ್ಮ ಸಂಸಾರ ನಡೆವುದು ಸುಸೂತ್ರ

-ದಿಲೀಪ್ ದೀಕ್ಷಿತ್ 

Comments